ಪ್ರಮುಖ ಸುದ್ದಿ

ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗುತ್ತಿದೆ : ಸಿಎಂ  ಬಿ.ಎಸ್ ಯಡಿಯೂರಪ್ಪ

ರಾಜ್ಯ(ಮಂಡ್ಯ)ಆ.30:- ಬರದಿಂದ ಕಂಗೆಟ್ಟಿದ್ದ ನಾಡಿನ‌ ರೈತರಿಗೆ ವರುಣ ದೇವನ ಕೃಪೆಯಿಂದ ರಾಜ್ಯದ ಎಲ್ಲಾ ಅಣೆಕಟ್ಟುಗಳು ಭರ್ತಿ ಆಗಿದ್ದು ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಅಣೆಕಟ್ಟು ಭರ್ತಿ ಆದ ಹಿನ್ನಲೆ ಕಾವೇರಿ ಮಾತೆಗೆ ಬಾಗಿನ‌ ಅರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಕೆ.ಆರ್.ಎಸ್ ಅಣೆಕಟ್ಟು 124.80 ಅಡಿ ತುಂಬಿದ್ದು, ಮಂಡ್ಯ ಹಾಗೂ ಮೈಸೂರು ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಈ ಭಾಗದ ಎಲ್ಲಾ ಕೆರೆಗಳಿಗೆ ಹೂಳು ತೆಗೆಸಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಶೇಖರಣೆ ಮಾಡಲು ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ತಮಿಳುನಾಡಿಗೆ ಬಿಡಬೇಕಾದ ಕಾವೇರಿ ನದಿಯ ನೀರನ್ನು ಈಗಾಗಲೇ ನೀಡಲಾಗಿದೆ. ಹಾಗಾಗಿ ‌ನಮ್ಮ‌ ರೈತರು ಸಂತಸದ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಬೆಂಗಳೂರು ನಗರದ ಕುಡಿಯುವ ‌ನೀರು ಸಹಾ ಕಾವೇರಿ ಮಾತೆಯ ಆಶೀರ್ವಾದದಿಂದ ಕೂಡಿರುವುದರಿಂದ ಬೆಂಗಳೂರು ನಗರದ ಜನರು ಸಹ ಸಂತಸದಿಂದ ಇರಬಹುದು ಎಂದರು.

ಕೆ.ಆರ್.ಎಸ್ ಒಂದು ಪ್ರವಾಸಿ ತಾಣವಾಗಿದೆ. ‌ಇಲ್ಲಿಗೆ ಸುಮಾರು ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ ಹಾಗಾಗಿ ಪ್ರವಾಸಿಗರನ್ನು ಆಕರ್ಷಿಸಲು ಕೆ.ಆರ್.ಎಸ್ ಸಂಪೂರ್ಣ ಸಮಗ್ರ ಅಭಿವೃದ್ಧಿ ಮಾಡಲು ಸರ್ಕಾರ ‌ಸಿದ್ದವಿದ್ದು, ಕೆಲವೇ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ ನಂತರ ತೀರ್ಮಾನಿಸಲಾಗುವುದು ಎಂದರು.

ಕೆ.ಆರ್.ಎಸ್ ಗ್ರಾಮದಲ್ಲಿ ಸುಮಾರು ಜನರು ವಾಸಿಸುತ್ತಿದ್ದು, ಅವರ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಸೂಕ್ತ ರೀತಿಯಲ್ಲಿ ಕಾನೂನು ರೀತಿಯಲ್ಲಿ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಹಾಗೂ ಮಂಡ್ಯ ಭಾಗದಲ್ಲಿ ಅಪಾರ ಕಬ್ಬು ಬೆಳೆ ಬೆಳೆಯುವುದರಿಂದ ಮಂಡ್ಯದ ಮೈ ಶುಗರ್ ಕಾರ್ಖಾನೆ ಮತ್ತು ಪಾಂಡವಪುರ ‌ಸಕ್ಕರೆ ಕಾರ್ಖಾನೆಗಳನ್ನು ಪುನರ್ ಆರಂಭಕ್ಕೆ ಅಧಿಕಾರಿಗಳ ‌ಜೊತೆ ಚರ್ಚಿಸಿ ಶೀಘ್ರವಾಗಿ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶಾಮ್, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ, ಶಾಸಕರಾದ ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಸುರೇಶ್ ಗೌಡ, ಬಿ. ಹರ್ಷವರ್ಧನ, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್, ಅನ್ನದಾನಿ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: