ಕ್ರೀಡೆ

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಕ್ರಿಕೆಟಿಗ ಅಂಬಟಿ ರಾಯುಡು

ಹೈದರಾಬಾದ್,ಆ.30-ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಟೀಂ ಇಂಡಿಯಾದ ಬಲಗೈ ಬ್ಯಾಟ್ಸ್ ಮನ್ ಅಂಬಟಿ ರಾಯುಡು 58 ದಿನಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ.

ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಈ ಹಿಂದೆ ನನ್ನ ನಿವೃತ್ತಿಯ ನಿರ್ಧಾರ ಭಾವನಾತ್ಮಕವಾಗಿತ್ತು. ಇದೀಗ ನಾನು ಆಯ್ಕೆಗೆ ಲಭ್ಯವಿರುತ್ತೇನೆ ಎಂದಿದ್ದಾರೆ. ಅಲ್ಲದೆ, ನಿವೃತ್ತಿ ನಿರ್ಧಾರವನ್ನು ಬದಲಾಯಿಸಿ ಎಲ್ಲ ಪ್ರಕಾರದ ಕ್ರಿಕೆಟ್ ಮುಂದುವರಿಸಲು ಬಯಸುವುದಾಗಿ ತಿಳಿಸಿದ್ದಾರೆ.

ನಾನು ನಿವೃತ್ತಿ ನಿರ್ಧಾರದಿಂದ ಹೊರ ಬಂದು, ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಆಡುವೆ ಎಂದು ತಿಳಿಸಲು ಬಯಸುವೆ. ನನ್ನ ಕಷ್ಟ ಕಾಲದಲ್ಲಿ ಬೆಂಬಲಕ್ಕೆ ನಿಂತಿದ್ದ, ನನ್ನಲ್ಲಿನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂದು ಮನವರಿಕೆ ಮಾಡಿಕೊಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಹಾಗೂ ನಿಯೊಲ್ ಡೇವಿಡ್‌ಗೆ ನಾನು ಕೃತಜ್ಞತೆ ಸಲ್ಲಿಸುವೆ. ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಲು ಸೆ.10ರಿಂದ ನಾನು ಲಭ್ಯವಿದ್ದೇನೆ. ಯುವ ಕ್ರಿಕೆಟಿಗರೊಂದಿಗೆ ಅನುಭವ ಹಂಚಿಕೊಳ್ಳಲು ಕಾತರದಲ್ಲಿರುವುದಾಗಿ ತಿಳಿಸಿದ್ದಾರೆ.

ರಾಯುಡು ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದು, ಅವರು 2019-20ರಲ್ಲಿ ಎಚ್‌ಸಿಎನ ಸೀಮಿತ ಓವರ್ ಮಾದರಿಯ ಕ್ರಿಕೆಟ್‌ಗೆ ಲಭ್ಯವಿದ್ದಾರೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ವಿಶ್ವಕಪ್‌ನಲ್ಲಿ ಐವರು ಮೀಸಲು ಆಟಗಾರರ ಪೈಕಿ ಒಬ್ಬರಾಗಿದ್ದ ರಾಯುಡು ಅವರು ಶಿಖರ್ ಧವನ್ ಗಾಯಗೊಂಡಾಗ ಅವರ ಬದಲಿಗೆ ತನ್ನನ್ನು ಆಯ್ಕೆ ಮಾಡದೇ ಇರುವುದಕ್ಕೆ ಬೇಸರಗೊಂಡು ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ವಿಶ್ವಕಪ್‌ಗೆ ಪ್ರಕಟಿಸಲಾಗಿದ್ದ 15 ಸದಸ್ಯರ ತಂಡದಲ್ಲೂ ರಾಯುಡುಗೆ ಸ್ಥಾನ ನಿರಾಕರಿಸಲಾಗಿತ್ತು. ಚೆನ್ನೈನ ವಿಜಯ್ ಶಂಕರ್ ಸ್ಥಾನ ಗಿಟ್ಟಿಸಿಕೊಂಡಿದ್ದರು. (ಎಂ.ಎನ್)

 

Leave a Reply

comments

Related Articles

error: