ಮೈಸೂರು

ಆಹಾರ ಪದಾರ್ಥಗಳು ವಿಷಪೂರಿತವಾಗಿವೆ : ಲಕ್ಷ್ಮಿ.ಡಿ.ರಾಜು ವಿಷಾದ

‘ಇಂದು ಆಹಾರ ಪದಾರ್ಥಗಳು ವಿಷಪೂರಿತವಾಗುತ್ತಿದ್ದು, ಅವುಗಳನ್ನು ಸ್ವೀಕರಿಸುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಿ ತೆಗೆದುಕೊಳ್ಳುವ ವಿಷಮ ಪರಿಸ್ಥಿತಿ ಬಂದೊದಗಿದೆ’  ಎಂದು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಲಕ್ಷ್ಮಿ.ಡಿ.ರಾಜು ಅವರು ವಿಷಾದ ವ್ಯಕ್ತಪಡಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮೈಸೂರು ಉಪ ವಿಭಾಗದ ಸುವರ್ಣ ಮಹೋತ್ಸವ ಅಂಗವಾಗಿ ಸೋಮವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರೈತರಿಗಾಗಿ ಏರ್ಪಡಿಸಲಾಗಿದ್ದ ‘ಶಾಶ್ವತ ಯೋಗಿಕ ಬೇಸಾಯ ಪದ್ದತಿ ಕಾರ್ಯಾಗಾರ’ವನ್ನು ಉದ್ಘಾಟಿಸಿದ ಅವರು ರೈತರಿಗೆ ವಿಶೇಷ ಉಪನ್ಯಾಸ ನೀಡಿದರು.

‘ಇಂದು ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದಾರೆ. ವಾತಾವರಣ ಕಲುಷಿತಗೊಳ್ಳುತ್ತಿರುವ ಕಾರಣದಿಂದ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಪಾಲಿ ಹೌಸ್ ಗಳನ್ನು ನಿರ್ಮಿಸುತ್ತಿದ್ದಾರೆ. ಆಹಾರ ಕೊರತೆ ನೀಗಲು ಹಸಿರು ಕ್ರಾಂತಿ ಉಂಟುಮಾಡಿದರು. ಆದರೆ ಈಗ ಹಸಿರು ಕ್ರಾಂತಿಯಿಂದಾಗಿ ವಿಷಪೂರಿತ ಆಹಾರ ಸಿಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆಧುನಿಕ ಕೃಷಿ ಪದ್ದತಿಯಿಂದಾಗಿ ಶುದ್ಧ ಆಹಾರ ಕಣ್ಮರೆಯಾಗುತ್ತಿದೆ. ಭಾರತ ಹಿಂದೆ ಕೃಷಿಕರ ಭಾರತವಾಗಿತ್ತು. ಆದರೆ ಇಂದು ಪುರಾತನ ಆಹಾರ ಪದ್ದತಿ ಬದಲಾಗುತ್ತಿದೆ. ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳು ಪುರಾತನ ಕೃಷಿ ಪದ್ದತಿಯನ್ನು ಮತ್ತೆ ಜಾರಿಗೆ ತರಲು ಶ್ರಮಿಸುತ್ತಿವೆ. ಸಾವಯವ ಬೇಸಾಯ ಮಾಡುವಂತೆ ಅರಿವು ಮೂಡಿಸುತ್ತಿದೆ. ಅಲ್ಲದೇ ಸಬ್ಸಿಡಿಗಳನ್ನು ನೀಡಿ ಉತ್ತೇಜಿಸುತ್ತಿದೆ ಎಂದು ಹೇಳಿದರು. ರೈತರೆಲ್ಲರೂ ಸಾವಯವ ಕೃಷಿ ಮಾಡುವುದರ ಜೊತೆಗೆ ಶ‍್ರೇಷ್ಠ ಸಂಕಲ್ಪ ಮಾಡಿದಾಗ ಮಾತ್ರ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ‍್ಯವಾಗುತ್ತದೆ ಎಂದರು.

ನಂತರ ‘ಕೃಷಿಕರ ಅನುಭವಾಮೃತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಅವರು, ಪ್ರಸ್ತುತ ಹೊಸ ಹೊಸ ಯೋಜನೆಗಳಿಂದಾಗಿ ಕೃಷಿ ಪದ್ದತಿ ಹಾಳಾಗುತ್ತಿದೆ. ಕಾರ್ಪೋರೇಟ್ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಿ ನಮ್ಮ ಪುರಾತನ ಕೃಷಿಯನ್ನು ನಾಶ ಮಾಡುತ್ತಿದ್ದೇವೆ ಎಂದರು.

ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಕೃಷಿ ಪದ್ದತಿಯನ್ನು ತಮ್ಮ ಸ್ವಾಮ್ಯಕ್ಕೆ ಒಳಪಡಿಸಿಕೊಂಡಿವೆ. ಈಗ ಬರುತ್ತಿರುವ ಎಲ್ಲಾ ಕೃಷಿ ಯೋಜನೆಗಳು ರೈತರಿಗೆ ವಿರುದ್ಧವಾಗಿದ್ದು, ಕೃಷಿ ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಕೃಷಿ ಕೇವಲ ಬೇಸಾಯ, ಅನ್ನ ಮತ್ತು ಮಾರುಕಟ್ಟೆಯನ್ನು ಮಾತ್ರ ಕೊಡುವುದಿಲ್ಲ. ಉತ್ತಮ ಸಂಸ್ಕೃತಿಯನ್ನು ಕಲಿಸಿಕೊಡುತ್ತದೆ. ಪ್ರಕೃತಿ ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಮಾನವ ಮಾತ್ರ ಪ್ರಕೃತಿಗೆ ಏನನ್ನೂ ಕೊಡದೆ ದೈವದತ್ತವಾಗಿ ಬಂದಿರುವ ನಿಸರ್ಗ ಸಂಪತ್ತನ್ನು ಹಾಳು ಮಾಡಿ ತನ್ನ ವಿನಾಶವನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ವಿಷಾದಿಸಿದರು.

ರೈತ ನಮ್ಮ ದೇಶದ ಮೊದಲ ವಿಜ್ಞಾನಿ. ಆದರೆ ಇಂದು ಜಾಗತೀಕರಣದ ಹೆಸರಿನಲ್ಲಿ ರೈತರ ವೈಜ್ಞಾನಿಕತೆಯನ್ನು ಕಸಿದುಕೊಂಡು ದಬ್ಬಾಳಿಕೆ ಮಾಡಲಾಗುತ್ತಿದೆ. ಇದರಿಂದಾಗಿಯೇ ರೈತರ ಆತ್ಮಹತ್ಯೆಗಳು ಸಂಭವಿಸುತ್ತಿವೆ ಎಂದರು.

ಈಶ್ವರೀಯ ವಿವಿಯ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ.ಪ್ರಾಣೇಶ್, ಗುರುಪ್ರಸಾದ್, ಕೈಲಾಸ್ ಮೂರ್ತಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: