ಪ್ರಮುಖ ಸುದ್ದಿಮೈಸೂರು

ಸೆ.5ರಂದು ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ : ಪ್ರಶಸ್ತಿ ಪ್ರದಾನ

ಮೈಸೂರು, ಆ.31 : ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಿತ್ರಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-2019, ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ವಿಜಯನಗರದ 2ನೇ ಹಂತದ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಆವರಣದಲ್ಲಿ ಸೆ.5ರಂದು ಇಡೀ ದಿನ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆಗೆ  ಹಿರಿಯ ಚಿತ್ರಕಲಾವಿದ ಎಸ್.ಎಂ.ಜಂಬುಕೇಶ್ವರ ಚಾಲನೆ ನೀಡುವರು, ಪ್ರತಿಷ್ಠಾನದ ನಿರ್ದೇಶಕ ಮೈಲಳ್ಳಿ ರೇವಣ್ಣ ಅಧ್ಯಕ್ಷತೆ ವಹಿಸುವರು, ನಿರ್ದೇಶಕರಾದ ಎ.ಪಿ.ರಾಜಶೇಖರ್, ಡಾ.ಹೆಚ್,ಟಿ.ರುದ್ರಣ್ಣ, ಲಿಂಗಪ್ಪ ಬರಗೂರು ಇರುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 11.30ಕ್ಕೆ ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಅವರು ಕಲಾಸಂಭ್ರಮವನ್ನು ಉದ್ಘಾಟಿಸುವರು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಆರ್.ಮೂಗೇಶಪ್ಪ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು, ಛಾಯಾಚಿತ್ರ ಕಲಾವಿದ ಲೋಕೇಶ್ ಮೊಸಳೆ ಪಿಆರ್.ಟಿ ಭಾವಚಿತ್ರ ಅನಾವರಣಗೊಳಿಸುವರು, 2.30ಕ್ಕೆ ವಿಚಾರ ಸಂಕಿರಣದಲ್ಲಿ ಕಲಾವಿದ ಎನ್.ಬಿ.ಕಾವೇರಪ್ಪ, ಜಾನಪದ ತಜ್ಞ ಯು.ಎಸ್.ರಾಮಣ್ಣ ವಿಷಯ ಮಂಡಿಸುವರು.

ಸಂಜೆ 4.30ಕ್ಕೆ ಪಿ.ಆರ್.ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸುವರು, ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಅಧ್ಯಕ್ಷತೆ. ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರ ಪ್ರಶಸ್ತಿ ಪ್ರದಾನ ಮಾಡಲಿರುವರು, ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ, ಖಜಾಂಚಿ ಪ್ರೊ.ಎಚ್.ಎಂ.ಪರಮೇಶ್ವರಯ್ಯ, ಮಾನಸ, ಮೈಲಳ್ಳಿ ರೇವಣ್ಣ, ಸಿ.ಚಿಕ್ಕಣ್ಣ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: