ಮೈಸೂರು

ವಿದ್ಯಾರ್ಥಿನಿಯರು ಆದಷ್ಟು ಮೊಬೈಲ್‍ನಿಂದ ದೂರವಿದ್ದು,  ತಾಳ್ಮೆ, ಸಂಯಮ, ಸಂಕಲ್ಪದಿಂದ ತಮ್ಮ ವ್ಯಕ್ತಿತ್ವರೂಪಿಸಿಕೊಳ್ಳಿ : ಸಚಿವ ವಿ.ಸೋಮಣ್ಣ ಸಲಹೆ

ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ 2019-20ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ

ಮೈಸೂರು,ಆ.31:- ಪ್ರತಿಭೆ ಎನ್ನುವುದು ಯಾರದೇ ಆಸ್ತಿಯಲ್ಲ, ದೈವದತ್ತವಾದುದು, ನಿರಂತರವಾದ ಪರಿಶ್ರಮದ ಫಲ. ಸರ್ಕಾರ ಮತ್ತು ಅಧಿಕಾರ ಶಾಶ್ವತವಲ್ಲ, ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿ ಮಾಡಿ ಸಮಾಜದಲ್ಲಿ ಅವರ ಏಳಿಗೆಯನ್ನು ಬಯಸುವುದು ತುಂಬಾ ಮುಖ್ಯ. ಆ ಕೆಲಸಗಳನ್ನು ಮಠ ಮಾನ್ಯಗಳು ಮಾಡುತ್ತಾ ಬಂದಿವೆ. ವಿದ್ಯಾರ್ಥಿನಿಯರು ಆದಷ್ಟು ಮೊಬೈಲ್‍ನಿಂದ ದೂರವಿದ್ದು,  ತಾಳ್ಮೆ, ಸಂಯಮದಿಂದ, ಸಂಕಲ್ಪದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.

ಅವರಿಂದು  ಶ್ರೀ ನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನ 2019-20ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಡತನ, ಸಿರಿತನ ಶಾಶ್ವತವಲ್ಲ. ವಿದ್ಯೆ ಶಾಶ್ವತ ಎಂದರು. ಪದವಿ ಪೂರ್ವ ಹಾಗೂ ಪದವಿ ಹಂತಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಮುಂದಿನ ಭವಿಷ್ಯವನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿನಿಯರು ತಾವು ಕಲಿತ ವಿದ್ಯಾ ಸಂಸ್ಥೆಯನ್ನು, ಗುರುಗಳನ್ನು, ತಂದೆ ತಾಯಿಗಳನ್ನು ಮರೆಯದೇ ಅವರನ್ನು ಗೌರವಿಸಬೇಕೆಂದು ಕರೆ ನೀಡಿದರು.

ಶ್ರೀಹೊಸಮಠ ಪಾರಂಪರಿಕ ಮಠ. ಬಸವಣ್ಣ ಮುಂತಾದವರ ಚಿಂತನೆಗಳನ್ನು ಜಾರಿಗೆ ತಂದಿರುವ ಮಠ. ಈ ಭಾಗದ ಹೆಣ್ಣು ಮಕ್ಕಳಿಗೆ ಹಂತ ಹಂತವಾಗಿ ವಿದ್ಯೆಯನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ಅವರನ್ನು ತರುವ ಶ್ರೀಗಳ ಪ್ರಯತ್ನ ಅವಿಸ್ಮರಣೀಯವಾದುದು. ಅವರ ತಪಸ್ಸಿನ ಫಲ ಎಷ್ಟೋ ಜನರಿಗೆ ದಾರಿ ದೀಪವಾಗಿದೆ. ಜೀವನದ ಮಟ್ಟದಲ್ಲಿ ಬದಲಾವಣೆ ಬಯಸುತ್ತಿರುವ ಎಲ್ಲಾ ವರ್ಗದ ಮಕ್ಕಳಲ್ಲಿ ಜ್ಞಾನದ ದಾಸೋಹ ನೀಡುವಲ್ಲಿ ಶ್ರೀ ನಟರಾಜ ಕಾಲೇಜು ಅದ್ವೀತಿಯವಾದುದು. ದೇವರನ್ನು ಹುಡುಕಿ ಹೋದರೆ ಸಿಗುವುದಿಲ್ಲ, ಆದರೆ ದೇವರಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದರೆ ಸಾರ್ಥಕತೆ ಸಿಗುತ್ತದೆ. ಬಡತನದ ನೆಲೆಯಲ್ಲಿ ಬರುವ ವಿದ್ಯಾರ್ಥಿನಿಯರಿಗೆ ಮಾನವೀಯ ಮೌಲ್ಯಗಳು ಹಾಗೂ ಸಂಯಮವನ್ನು ಶ್ರೀಗಳು ಕಲಿಸುತ್ತಿರುವುದು ಶ್ಲಾಘನೀಯ ಎಂದರು.

ವಿಶ್ವದ ಭೂಪಟದಲ್ಲಿ ಒಂದು ನಾಡ ಹಬ್ಬವನ್ನು ಆಚರಿಸುವುದೆಂದರೆ ಅದು ನಮ್ಮ ಮೈಸೂರು ದಸರಾ ಮಾತ್ರ. ಈ ದಸರಾವನ್ನು ಉತ್ತಮ ಸಂಪ್ರದಾಯದೊಂದಿಗೆ ಮನೆ ಮನೆಯ ದಸರಾವನ್ನಾಗಿ ಪಕ್ಷಾತೀತವಾಗಿ ಆಚರಿಸಲಾಗುವುದು ಎಂದರು. ಭೀಕರ ಬರಗಾಲದ ಸಂದರ್ಭದಲ್ಲಿ ಕೆಲವೇ ದಿನಗಳಲ್ಲಿ ನಮ್ಮ ನಾಡಿನ ಎಲ್ಲಾ ಜಲಾಶಯಗಳು ತುಂಬಿರುವುದು ದೇವರು ಮತ್ತು ಪ್ರಕೃತಿ ನಮಗೆ ಕೊಟ್ಟ ವರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜೆ.ಎಸ್.ಎಸ್. ಕಾಲೇಜು ಪ್ರಾಧ್ಯಾಪಕರಾದ ಪ್ರೊ. ಡಿ.ಎಸ್. ಸದಾಶಿವಮೂರ್ತಿ ಮಾತನಾಡಿ  ವಿದ್ಯಾಭ್ಯಾಸ ಕೇವಲ ಜ್ಞಾನ ಕೊಡುವುದಲ್ಲ. ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದು ಅದರ ಪ್ರಮುಖ ಗುರಿಯಾಗಬೇಕು. ಒಬ್ಬ ವಿದ್ಯಾರ್ಥಿಯು ಭೌತಿಕ, ಬೌದ್ಧಿಕ ಮತ್ತು ಭಾವನಾತ್ಮಕವಾಗಿ ಬೆಳವಣಿಗೆ ಹೊಂದಿದಾಗ ಮಾತ್ರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪಠ್ಯ, ಪಠ್ಯಪೂರಕ ಮತ್ತು ಪಠ್ಯೇತರ ಚಟುವಟಿಕೆ ಈ ಮೂರನ್ನು ಸೇರಿಸಿ ವಿದ್ಯಾರ್ಥಿಗಳು ಸಮರ್ಪಕವಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಅವಕಾಶಗಳು ನಮಗಾಗಿ ಕಾಯುವುದಿಲ್ಲ. ಅವಕಾಶವನ್ನು ನಾವೇ ಸೃಷ್ಠಿಸಿಕೊಂಡು ಬೆಳೆಯಬೇಕು. ಅಲ್ಲದೇ ಅವಕಾಶಗಳು ಸಿಕ್ಕಿದಾಗ ಸರಿಯಾಗಿ ಬಳಸಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಯಶಸ್ಸು ಆಕಸ್ಮಿಕವಲ್ಲ. ಅದಕ್ಕೆ ಅವಿರಥವಾದ ಪರಿಶ್ರಮಬೇಕು. ಥಾಮಸ್ ಆಲ್ವಾ ಎಡಿಸನ್ ಸುಮಾರು ಎರಡು ಸಾವಿರ ಆವಿಷ್ಕಾರಗಳನ್ನು ಮಾಡಿ, ಜಗತ್ತಿಗೆ ಹಲವಾರು ಕೊಡುಗೆಗಳನ್ನು ಕೊಟ್ಟಿರುವುದರಲ್ಲಿ ಆತನ ಶ್ರಮ ಮತ್ತು ಪ್ರಯತ್ನವನ್ನು ನಾವು ತಿಳಿಯಬೇಕು. ಶಬ್ದಕೋಶದಲ್ಲಿ ಮಾತ್ರ ‘ಯಶಸ್ಸು’ ಮೊದಲು ಬರುತ್ತದೆ. ಶ್ರಮ ನಂತರ ಬರುತ್ತದೆ. ಆದರೆ ನಿಜ ಜೀವನದಲ್ಲಿ ಮೊದಲು ‘ಶ್ರಮ’ ಪಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಂದು ಅಂಗೈಯಲ್ಲೇ ಇಡೀ ಜಗತ್ತು ಇದೆ. ಅದನ್ನು ನಮ್ಮ ಜ್ಞಾನಾರ್ಜನೆಯ ಬೆಳವಣಿಗೆಗೆ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಿ, ಬೀಗದೆ ಬಾಗಿ ಬದುಕಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ‘ವಾತ್ಸಲ್ಯ ವಾಹಿನಿ ತ್ರೈಮಾಸಿಕ ಪತ್ರಿಕೆ’ ಯನ್ನು ಬಿಡುಗಡೆ ಮಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್  ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ  ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗುವ ಕೆಲಸವನ್ನು ಶ್ರೀಗಳು ನಡೆಸಿಕೊಂಡು ಬಂದಿದ್ದಾರೆ. ಕಾಲೇಜಿನಲ್ಲಿ ನಡೆದ ಹಲವಾರು ಕಾರ್ಯಕ್ರಮಗಳನ್ನು, ವಿದ್ಯಾರ್ಥಿಗಳ ಉದಯೋನ್ಮುಖ ಬರಹಗಳನ್ನು ಪ್ರಕಟಿಸುವ ಇಂತಹ ವಾಹಿನಿಗಳು ಬಹಳಷ್ಟು ಅವಶ್ಯಕ. ಓದುವುದರ ಜೊತೆಗೆ ತಮಗೆ ಅನಿಸಿದ ಭಾವನೆಗಳನ್ನು ಅಭಿವ್ಯಕ್ತಿಸುವುದಕ್ಕೆ ಇಂತಹ ಸಂಚಿಕೆಗಳು ತುಂಬಾ ಸಹಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

 ಇದೇ ವೇಳೆ ಶ್ರೀ ನಟರಾಜ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯ ಚೆಕ್‍ನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ನಿ.ಪ್ರ.ಸ್ವ. ಚಿದಾನಂದಮಹಾಸ್ವಾಮಿಗಳು ಸಚಿವರಿಗೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ವಿಶೇಷಾಧಿಕಾರಿಗಳಾದ ಪ್ರೊ. ಎಸ್. ಸತ್ಯನಾರಾಯಣರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾನ್ಯ,   ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳಾದ  ಡಾ. ಎಂ. ಶಾರದ., ವಿ. ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.  (ಎಸ್.ಎಚ್)

Leave a Reply

comments

Related Articles

error: