ಮೈಸೂರು

ಮೈಸೂರು ಸ್ವಚ್ಛ ನಗರಿ ಬಿರುದು ಪಡೆಯಲು ರಾಜವಂಶಸ್ಥರ ದೂರದರ್ಶಿತ್ವವೇ ಕಾರಣ : ಅಂಶಿ ಪ್ರಸನ್ನ ಕುಮಾರ್ ಅಭಿಮತ

ಸಾಂಸ್ಕೃತಿಕ ನಗರಿ ಮೈಸೂರು ಇಂದು ಇಷ್ಟು ಸುಂದರವಾಗಿರಲು, ಎರಡು ಬಾರಿ ಸ್ವಚ್ಛನಗರಿ ಬಿರುದು ಪಡೆದುಕೊಳ್ಳಲು ರಾಜವಂಶಸ್ಥರ ದೂರದರ್ಶಿತ್ವವೇ ಕಾರಣ ಎಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.

ಸೋಮವಾರ ಶ್ರೀ ಚಾಮರಾಜೇಂದ್ರ ಅರಸು ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ನಜರ್‍ಬಾದ್‍ನಲ್ಲಿರುವ ವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀಕಂಠದತ್ತ ಒಡೆಯರ್ ಅವರ 64ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮೈಸೂರು ಇಂದು ವಿಶ್ವ ಭೂಪಟದಲ್ಲಿ ಸ್ಥಾನ ಪಡೆಯಲು ರಾಜವಂಶಸ್ಥರ ಕೊಡುಗೆಯೇ ಕಾರಣ. ಅವರ ಆಡಳಿತಾವಧಿಯಲ್ಲಿ ಸಾವಿರ ವರ್ಷಗಳ ಮುಂದಾಲೋಚನೆಯಿಂದ ಮೈಸೂರನ್ನು ನಿರ್ಮಿಸಿದ್ದಾರೆ. ಇಂದಿನ ಜನಪ್ರತಿನಿಧಿಗಳು ಅವರು ಮಾಡಿರುವ ಕೆಲಸಗಳನ್ನು ಮುಂದುವರಿಸಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಹೆಚ್ಚಿನದೇನನ್ನೂ ಮಾಡುತ್ತಿಲ್ಲ. ಮೈಸೂರು ರಾಜವಂಶಸ್ಥರ ಹೆಮ್ಮೆಯ ಪ್ರತೀಕವಾಗಿದ್ದು ನಗರದ ಅಭಿವೃದ್ಧಿಯ ಪ್ರತಿಫಲ ಅವರಿಗೇ ಸಲ್ಲಬೇಕು ಎಂದು ಹೇಳಿದರು.

ಶ್ರೀಕಂಠದತ್ತ ಒಡೆಯರ್ ಓರ್ವ ಸಮಾಜಮುಖಿ ವ್ಯಕ್ತಿ. ರಾಜಮನೆತನದಲ್ಲಿ ಜನಿಸಿದರು. ಜನಸಾಮಾನ್ಯರೊಂದಿಗೆ ಬೆರೆಯಲು ಇಷ್ಟಪಡುತ್ತಿದ್ದರು. ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಅಪಾರ ಸೇವೆ ಸಲ್ಲಿಸುತ್ತಿದ್ದರು. 4 ಬಾರಿ ಲೋಕಸಭೆಗೆ ಆಯ್ಕೆಯಾಗಿ ತಮ್ಮ ಜನಪ್ರಿಯತೆ ಎಷ್ಟಿತ್ತೆಂಬುದನ್ನು ತೋರಿಸಿದ್ದರು. ಅವರ ದೂರಾಲೋಚನೆ, ಆಡಳಿತ ವೈಖರಿ, ಸಾರ್ವಜನಿಕರನ್ನು ಕಾಣುವ ಬಗೆ ಎಲ್ಲವೂ ಮಾದರಿಯಾಗುವಂತಹದ್ದು ಎಂದ ಅವರು, ಸರ್ಕಾರ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಿದರೂ, ಅದ್ದೂರಿಯಾಗಿ ಮಾಡಿದರೂ ಜನ ಸೇರುವುದು ರಾಜವಂಶಸ್ಥರ ಮೇಲಿನ ಗೌರವದಿಂದ. ಸರ್ಕಾರ ಪ್ರತಿವರ್ಷವೂ ಅವರನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅವರಿಗೆ ಇನ್ನಷ್ಟು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಚಾಮರಾಜೇಂದ್ರ ಅರಸು ಎಜ್ಯುಕೇಷನ್ ಟ್ರಸ್ಟ್‍ನ ಉಪಾಧ್ಯಕ್ಷೆ ಡಾ.ಭಾರತಿ ಶ್ರೀಧರ್ ರಾಜೇ ಅರಸ್, ಟ್ರಸ್ಟಿ ಶ್ರೀಕಂಠರಾಜೇ ಅರಸ್, ಕಾರ್ಯದರ್ಶಿ ಮಹೇಶ್.ಎನ್ ಅರಸ್ ಸೇರಿದಂತೆ ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

comments

Related Articles

error: