ಪ್ರಮುಖ ಸುದ್ದಿ

ಗೋಣಿಕೊಪ್ಪಲು ರೋಟರಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುಗೆ

ರಾಜ್ಯ(ಮಡಿಕೇರಿ)   ಆ.31:-   ಗೋಣಿಕೊಪ್ಪಲು ರೋಟರಿ ಕ್ಲಬ್ ನಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ವಲಯ ಕಾರ್ಯದರ್ಶಿಅನಿಲ್ ಎಚ್.ಟಿ., ಶಿಕ್ಷಣಕ್ಕೆ ರೋಟರಿ ಸಂಸ್ಥೆ  ಆದ್ಯತೆ ನೀಡುತ್ತಲೇ ಬಂದಿದ್ದು, ಪ್ರಕೃತಿ ವಿಕೋಪಕ್ಕೀಡಾದಾಗಲೂ ಕೊಡಗಿನಲ್ಲಿ ಸಂಕಷ್ಟದಲ್ಲಿದ್ದ ಕುಟುಂಬಗಳ ಮಕ್ಕಳಿಗೆ ವಲಯದ ರೋಟರಿ ಸಂಸ್ಥೆಗಳು ಶಿಕ್ಷಣಕ್ಕೆ ಸಾಕಷ್ಟು ನೆರವು ನೀಡಿದೆ. ಶಿಕ್ಷಣ ಶುಲ್ಕವನ್ನೂ ರೋಟರಿ ಸದಸ್ಯರು ಪಾವತಿಸಿ ಸಹಾಯಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು. ನೈಸರ್ಗಿಕ ವಿಕೋಪಕ್ಕೀಡಾದ ತೋರ ಗ್ರಾಮದ ಸಂತ್ರಸ್ಥ ಬೆಳ್ಯಪ್ಪ ಮನೆಯ 5 ಕೋಣೆಗಳಿಗೂ 35 ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ದೀಪ ಕೊಡುಗೆಯಾಗಿ ನೀಡಿದ ಗೋಣಿಕೊಪ್ಪ ರೋಟರಿ ಸೇವಾ ಕಾರ್ಯವನ್ನೂ ಅನಿಲ್ ಪ್ರಶಂಸಿಸಿದರು.  ಅಂತೆಯೇ ಮಡಿಕೇರಿ ಮಿಸ್ಟಿ ಹಿಲ್ಸ್ ಸಂತ್ರಸ್ಥರಿಗೆ ಸಾಂತ್ವನ ಕಾರ್ಯಕ್ರಮದ ಮೂಲಕ ಧೈರ್ಯ, ಸ್ಥೈರ್ಯ ತುಂಬುವಂತಹ ವಿನೂತನ ಕಾರ್ಯಕ್ರಮ ಆಯೋಜಿಸಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಗೋಣಿಕೊಪ್ಪ ರೋಟರಿ ಅಧ್ಯಕ್ಷ ಕಾಡ್ಯಮಾಡ  ನೆವೀನ್ ಮಾತನಾಡಿ, ದೆಹಲಿಯ  ಓರೆಕಲ್ ಸಂಸ್ಥೆ ಮತ್ತು ಪ್ರಥಮ್ ಪಬ್ಲಿಕೇಶನ್ಸ್ ನವರು ರೋಟರಿ ಸದಸ್ಯರಾದ  ಅರುಣ್ ತಮ್ಮಯ್ಯ ಮೂಲಕ 3500 ಪುಸ್ತಕಗಳನ್ನು ಗೋಣಿಕೊಪ್ಪ ರೋಟರಿಗೆ ನೀಡಿದ್ದು ಈ ಪುಸ್ತಕಗಳನ್ನು ವಿವಿಧ ರೋಟರಿ ಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ವಿತರಿಸಲಾಗುತ್ತಿದೆ.  ವಿಜ್ಞಾನ, ಆಂಗ್ಲ, ಗಣಿತ ಹಾಗೂ ಸಾಮಾನ್ಯ ಜ್ಞಾನ ಸಂಬಂಧಿತ ಪುಸ್ತಕಗಳು ಶಾಲಾ ಗ್ರಂಥ ಬಂಡಾರಕ್ಕೆ ಅಮೂಲ್ಯ ಆಸ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್  ಅಧ್ಯಕ್ಷ ಎಂ.ಆರ್.ಜಗದೀಶ್ ಪ್ರಶಾಂತ್ ಪುಸ್ತಕ ಸ್ವೀಕರಿಸಿ ಮಾತನಾಡಿ,   ಕಲಿಯುವಂಥದ್ದು ನಿರಂತರ ಪ್ರಕ್ರಿಯೆಯಾಗಿದ್ದು ಮಡಿಕೇರಿ ಮಿಸ್ಟಿ ಹಿಲ್ಸ್ ಕೂಡ 15 ವರ್ಷ ಗಳಿಂದ ಶೈಕ್ಷಣಿಕಯೋಜನೆಗಳಿಗೆ ಮಹತ್ವ ನೀಡಿದೆ. ರೋಟರಿ ಮಿಸ್ಟಿ ಹಿಲ್ಸ್  ನಾಪೋಕ್ಲುವಿನ 2 ಶಾಲೆಗಳಲ್ಲಿ ಇಂಟರ್ಯಾಕ್ಟ್ ಮತ್ತು ಮಡಿಕೇರಿಯ ಕಾರ್ಯಪ್ಪ ಕಾಲೇಜಿನಲ್ಲಿ ರೋಟರ್ಯಾಕ್ಟ್ ಕ್ಲಬ್ ಮೂಲಕ ವಿದ್ಯಾರ್ಥಿಗಳ  ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದರು.

ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಟಿ.ಬಿ.ಪೂಣಚ್ಚ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ  ಪ್ರಮೋದ್ ಕುಮಾರ್ ರೈ, ಮಾಜಿ ಸಹಾಯಕ ಗವರ್ನರ್ ಡಾ.ಚಂದ್ರಶೇಖರ್, ರೀಟಾ ದೇಚಮ್ಮ ಸೇರಿದಂತೆ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: