ಮೈಸೂರು

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಿದರೆ ಶಿಕ್ಷಾರ್ಹ ಅಪರಾಧವಾಗಲಿದೆ : ಎಂ.ಜೆ.ರವಿಕುಮಾರ್.

ನಗರಗಳನ್ನು ಪೋಸ್ಟರ್ ಮುಕ್ತ ಮಾಡುವ ಉದ್ದೇಶದಿಂದ ಸ್ವಚ್ಛಭಾರತ ಅಭಿಯಾನದಡಿಯಲ್ಲಿ ಮೈ ಇಂಡಿಯಾ ಪೋಸ್ಟರ್ ಫ್ರೀ ಇಂಡಿಯಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ಸ್ವಚ್ಛಭಾರತ ಅಭಿಯಾನದ ಕರ್ನಲ್ ಶಿವರಾಜ್‍ಕುಮಾರ್ ತಿಳಿಸಿದರು.

ಸೋಮವಾರ ಮಹಾನಗರ ಪಾಲಿಕೆಯ ಕೌನ್ಸಿಲ್ ಹಾಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸುವುದು, ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುವುದರಿಂದ ನಗರದ ಅಂದ ಹಾಳಾಗುತ್ತದೆ. ಅಲ್ಲದೆ ಇದು ಶಿಕ್ಷಾರ್ಹ ಅಪರಾಧವಾಗಿದ್ದು ಒಂದು ವರ್ಷದವರೆಗೂ ಶಿಕ್ಷೆ ವಿಧಿಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈಜೋಡಿಸಿ ನಗರದ ಅಂದವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಪೋಸ್ಟರ್‍ಗಳು, ಪ್ಲೆಕ್ಸ್‍ಗಳನ್ನು ಅಂಟಿಸುವುದರಿಂದ ಉಂಟಾಗುವ ದುಷ್ಪರಿಣಾಮದ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಮೇಯರ್ ಎಂ.ಜೆ.ರವಿಕುಮಾರ್, ಮೈಸೂರು ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಬಿರುದಿಗೆ ಪಾತ್ರವಾಗಿದೆ. ಮೂರನೇ ಬಾರಿಯೂ ದೊರೆಯುವ ನಿರೀಕ್ಷೆ ಇದೆ. ನಗರದಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ್, ಪೋಸ್ಟರ್‍ಗಳನ್ನು ಅಂಟಿಸುವುದರಿಂದ ನಗರದ ಅಂದ ಹಾಳಾಗುವುದಲ್ಲದೆ ಸ್ವಚ್ಛತೆಯೂ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‍ಗಳನ್ನು ಅಂಟಿಸಬಾರದು.  ಅಂಟಿಸಿದಲ್ಲಿ ಕ್ರಿಮಿನಲ್ ದೂರು ದಾಖಲಿಸಿ, ಸಾವಿರ ರೂ.ದಂಡ  ಅಥವಾ 6ತಿಂಗಳು ಜೈಲುವಾಸ ಶಿಕ್ಷೆ ನೀಡಲಾಗುವುದು.  ಚಲನಚಿತ್ರಗಳ ಪೋಸ್ಟರ್‍ಗಳನ್ನು ಅಂಟಿಸಲು ನಗರದ ಯಾವುದಾದರೊಂದು ಭಾಗದಲ್ಲಿ ಸ್ಥಳವನ್ನು ಗುರುತಿಸಿ ಅಲ್ಲಿ ಅಂಟಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್, ಡಿಸಿಪಿ ರುದ್ರಮುನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ಕೆ.ವಿ.ಮಲ್ಲೇಶ್, ಸ್ವಚ್ಛಭಾರತ ಅಭಿಯಾನದ ಸಂಚಾಲಕ ಡಾ.ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: