ದೇಶ

ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಮೇಧಾ ಪಾಟ್ಕರ್

ಭೋಪಾಲ್,ಸೆ.3- ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಕೈಗೊಂಡಿದ್ದ 9 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.

ಸರ್ದಾರ್ ಸರೋವರ ಜಲಾಶಯದ ಸುತ್ತಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಬೇಡಿಕೆ ಈಡೇರಿಸುವುದಾಗಿ ಮಧ್ಯ ಪ್ರದೇಶ ಸರ್ಕಾರ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಆಗಸ್ಟ್ 25ರಂದು ಬಡ್ವಾನಿ ಜಿಲ್ಲೆಯಲ್ಲಿ ಮೇಧಾ ಅವರು ನರ್ಮದಾ ಚುನೌತಿ ಸತ್ಯಾಗ್ರಹ ಆರಂಭಿಸಿದ್ದರು. ನಾಲ್ಕು ದಿನಗಳ ನಂತರ ಎಂಟು ಗ್ರಾಮಸ್ಥರು ಈ ಸತ್ಯಾಗ್ರಹಕ್ಕೆ ಕೈ ಜೋಡಿಸಿದರು. ಸೆ.3ರಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್ ಅವರು ಮೇಧಾ ಅವರು ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್‌ಸಿ ಬೆಹರ್ ಅವರನ್ನು ಕಳಿಸಿ ಬೇಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದರು.

ಸತ್ಯಾಗ್ರಹದ ಬಗ್ಗೆ ಕಮಲ್‌ನಾಥ್ ಅವರ ಕಾಳಜಿಯನ್ನು ಬೆಹರ್, ಮೇಧಾ ಪಾಟ್ಕರ್‌ಗೆ ತಿಳಿಸಿದ್ದು ಸರ್ದಾರ್ ಸರೋವರ್ ಜಲಾಶಯದ ನೀರಿನ ಮಟ್ಟವನ್ನು ಇಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಬೆಹರ್ ಅವರು ಮೇಧಾ ಅವರಿಗೆ ನಿಂಬೆ ಹಣ್ಣಿನ ರಸ ನೀಡಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ್ದಾರೆ.
ನರ್ಮದಾ ಬಚಾವೊ ಆಂದೋಲನದ ಮುಖಂಡರು ಸೆ.9ರಂದು ನರ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: