
ಪ್ರಮುಖ ಸುದ್ದಿ
ಕೊಡಗಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಗಣೇಶೋತ್ಸವ
ರಾಜ್ಯ(ಮಡಿಕೇರಿ) ಸೆ.4 :- ಕೊಡಗು ಜಿಲ್ಲೆಯಾದ್ಯಂತ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವಿವಿಧ ಗಣೇಶೋತ್ಸವ ಸಮಿತಿಗಳು 400 ಕ್ಕೂ ಹೆಚ್ಚು ಭಾಗಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಮಡಿಕೇರಿಯ ಕೋಟೆ ಶ್ರೀಮಹಾಗಣಪತಿ ದೇವಾಲಯದಲ್ಲಿ ಸೋಮವಾರ ಬೆಳಗ್ಗಿನಿಂದಲೇ ಅಭಿಷೇಕ, ಅಲಂಕಾರ, ಅರ್ಚನೆ, ಹೋಮ ಹವನಾದಿ ವಿಶೇಷ ಪೂಜೆಗಳು ನಡೆದವು. ಭಕ್ತರು ಸಾವಿರಾರು ಈಡುಗಾಯಿ ಸೇವೆಯನ್ನು ಮಹಾಗಣಪತಿಗೆ ಅರ್ಪಿಸಿದರು.
ಉಳಿದಂತೆ ನಗರದ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ, ದೇಚೂರು ಶ್ರೀವಿದ್ಯಾಗಣಪತಿ, ಕನ್ನಂಡಬಾಣೆಯ ದೃಷ್ಟಿ ಗಣಪತಿ, ಕಾಲೇಜು ರಸ್ತೆಯ ವಿಜಯವಿನಾಯಕ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಗಣೇಶನ ಆರಾಧನೆ ನಡೆಯಿತು. ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ನಗರದಲ್ಲಿ 25 ಕ್ಕೂ ಹೆಚ್ಚಿನ ಗಣೇಶೋತ್ಸವ ಸಮಿತಿಗಳು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆ. ಕೆಲವು ಸಮಿತಿಗಳು ಸೆ.2 ರಂದೇ ಗಣೇಶ ಮೂರ್ತಿಯನ್ನು ವಿಸರ್ಜಿಸಿದವು.
ವಿರಾಜಪೇಟೆಯಲ್ಲಿ ಈ ಬಾರಿ ಮಹಾಮಳೆಯಿಂದ ಸಾವು, ನೋವುಗಳು ಸಂಭವಿಸಿರುವುದರಿಂದ ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಸೋವಾರಪೇಟೆಯಲ್ಲಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವುದರೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.
ಕುಶಾಲನಗರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಗಣಪತಿ ದೇವಾಲಯದಲ್ಲೂ ಗೌರಿ, ಗಣೇಶೋತ್ಸವ ವಿಶೇಷ ಪೂಜೆಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. (ಕೆಸಿಐ,ಎಸ್.ಎಚ್)