ಕರ್ನಾಟಕ

ಡಿಕೆಶಿ ಅವರನ್ನು ಬಂಧಿಸಿ ಯಾರನ್ನು ಹೀರೋ ಮಾಡುವ ಅವಶ್ಯಕತೆಯಿಲ್ಲ: ಜೆ.ಸಿ.ಮಾಧುಸ್ವಾಮಿ

ಬೆಳಗಾವಿ,ಸೆ.4-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ಮಾಡಿಸಿ ಯಾರನ್ನು ಹೀರೋ ಮಾಡುವ ಅವಶ್ಯಕತೆ ನಮಗಿಲ್ಲ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ನೆರೆ ಪೀಡಿತ ಸ್ಥಳಗಳ ಭೇಟಿ ಕಾರಣದಿಂದ ಆಗಮಿಸಿದ ಸಂದರ್ಭದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಇಲಾಖೆ ಡಿಕೆಶಿ ಅವರನ್ನು‌ ಬಂಧಿಸಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ ಎಂದಿದ್ದಾರೆ.

ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಮಾಡೋದೂ ಇಲ್ಲ. ನಾವೇ ಮಾಡಿದ ಕಾನೂನು ಅವರನ್ನು ಬಂಧಿಸುವಂತೆ ಮಾಡಿದೆ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಬಂಧನಕ್ಕೆ ಬಿಜೆಪಿ ಹೊಣೆ ಎನ್ನುವುದು ತಪ್ಪು ಕಲ್ಪನೆ” ಎಂದು ಜೆ. ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು. ಡಿಕೆಶಿ ಬಂಧನ ಖಂಡಿಸಿ ಅವರ ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆ ಮಾಡೋದು ಸಹಜ. ಅದು ಅವರ ವೈಯಕ್ತಿಕ ವಿಚಾರ ಎಂದರು.

ನಾನು ಬೆಳಗಾವಿ ಜಿಲ್ಲೆಯ ಪ್ರವಾಸದಲ್ಲಿ ಸಣ್ಣ ನೀರಾವರಿಗೆ ಸೇರಿದಂತೆ ಕೆರೆಗಳು ಹಾನಿಯಾಗಿರುವ ಕುರಿತು ಸ್ವತಃ ಪರಿಶೀಲನೆ ನಡೆಸಲಿದ್ದೇನೆ. ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದೇನೆ ಎಂದರು.

ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿಲ್ಲ. ನೆರೆಯಲ್ಲಿ ಕೊಚ್ಚಿ ಹೋದವರಿಗೆ ಪರಿಹಾರ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವುದರ ಕುರಿತು ಸಮಿತಿ ರಚನೆ ಮಾಡಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ.

ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ಐದು ಎಕರೆ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಹೊಂದಿರುವವರಿಗೆ ಪರಿಹಾರ ಸಿಗುವುದು ಕಷ್ಟ. ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಲಾಗುವುದು. ಯಾವುದರಲ್ಲಿ ಅಡ್ಡಿಯಾಗುತ್ತಿದೆ ಎನ್ನುವುದನ್ನು ವಿಪಕ್ಷದವರು ಸ್ಪಷ್ಟವಾಗಿ ಹೇಳಲಿ ಎಂದು ಮಾಧು ಸ್ವಾಮಿ ಹೇಳಿದರು. (ಎಂ.ಎನ್)

Leave a Reply

comments

Related Articles

error: