ಪ್ರಮುಖ ಸುದ್ದಿಮೈಸೂರು

ಪ್ರಧಾನಿಗಳಿಗೆ ಭ್ರಷ್ಟಾಚಾರವನ್ನು ನಿರ್ನಾಮ ಮಾಡುವ ಗುರಿ ಇದ್ದರೆ ಸ್ವಾಗತ, ನಿಮ್ಮ  ಪಕ್ಷದ ನಾಯಕರು  ನಮ್ಮ ಶಾಸಕರನ್ನು  ಕರೆದೊಯ್ದಿದ್ದಾಗ ಇಡಿ ಅಧಿಕಾರಿಗಳು  ಎಲ್ಲಿ ಹೋಗಿದ್ರು : ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನೆ

ಮೈಸೂರು,ಸೆ.4:- ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾ.ರಾ ಮಹೇಶ್ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತೀವ್ರ ಟೀಕಿಸಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಡೀ ದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹೆಸರು ಮಾಡಿರುವ ನಾಯಕರನ್ನು ಮಾನಸಿಕವಾಗಿ ದುರ್ಬಲ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿಕೆಶಿವಕುಮಾರ್ ಈ ಹಿಂದೆ ಗುಜರಾತ್ ನ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಕ್ಕೆ ಹೀಗಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ರಾಜಕಾರಣ ದಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಸಹಜ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಇಡೀ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂದು ಸಾಂವಿಧಾನಿಕ ಸಂಸ್ಥೆಗಳನ್ನು  ಬಳಸಿಕೊಂಡು ಕೆಲಸ ಮಾಡುತ್ತಿದೆ.  ಎಲ್ಲರಿಗೂ ಧಾರ್ಮಿಕ ಭಾವನೆಗಳಿರುತ್ತದೆ. ದೇಶದಲ್ಲಿ ಚಿದಂಬರಂ ನಂತರ ರಾಜ್ಯದ ಪ್ರಭಾವಿ ರಾಜಕಾರಣಿಯನ್ನು ಮಟ್ಟ ಹಾಕುವ ಕೆಲಸ ಮಾಡ್ತಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ  ಗೌರಿ ಗಣೇಶ ಹಬ್ಬಕ್ಕೆ  ಒಬ್ಬ ರಾಜಕೀಯ ಪಕ್ಷದ ನಾಯಕನನ್ನು  ಬಿಡದೆ ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿಗಳಿಗೆ ಭ್ರಷ್ಟಾಚಾರವನ್ನು ನಿರ್ನಾಮ ಮಾಡುವ ಗುರಿ ಇದ್ದರೆ ಸ್ವಾಗತ. ಆದರೆ ಇತ್ತೀಚಿನ  ದಿನಗಳಲ್ಲಿ ನಿಮ್ಮ  ಪಕ್ಷದ ನಾಯಕರು  ನಮ್ಮ ಶಾಸಕರನ್ನು  ಕರೆದೊಯ್ದಿದ್ದಾಗ ನಿಮ್ಮ ಇಡಿ ಅಧಿಕಾರಿಗಳು  ಎಲ್ಲಿ ಹೋಗಿದ್ರು. ಆಗ ಇಡಿ ಅಧಿಕಾರಿಗಳು ದೇಶದಲ್ಲಿ ಇರಲಿಲ್ವಾ  ಎಂದು ಪ್ರಶ್ನಿಸಿದರು.

ಆಪರೇಷನ್  ಕಮಲಕ್ಕೆ  ಬಂದಂತಹ  ಹಣ ಯಾವುದು ? ಮೂಲ ಹಣ ಯಾವುದು?  ತನಿಖೆ ನಡೆಸಲಿ.  ಸೇಡಿನ ರಾಜಕಾರಣ ಮಾಡಬಾರದು. ನೀವು ಭ್ರಷ್ಟಾಚಾರ  ಪೋಷಿಸುತ್ತಿರೋ ಅಥವಾ ಭ್ರಷ್ಟಾಚಾರ ನಿಗ್ರಹ ಮಾಡ್ತೀರೋ ..? ಆಪರೇಷನ್ ಕಮಲ  ಕುರಿತು ಪ್ರಾರಂಭದಿಂದಲೂ ತನಿಖೆ ಆಗ್ಬೇಕು. ಹುಣಸೂರು, ಕೆ. ಆರ್ ನಗರ  ಬೆಳಗಾವಿ, ಶಿವಮೊಗ್ಗ,  ಮುಂಬೈ ಬೆಂಗಳೂರು ಇಲ್ಲೆಲ್ಲ ನಡೆದ ಫೋನ್  ಸಂಭಾಷಣೆ ಗಳೆಲ್ಲದರ ಬಗ್ಗೆ ತನಿಖೆ ನಡೆಸಲಿ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಸಾ.ರಾ ಮಹೇಶ್ ಪರೋಕ್ಷ ಟಾಂಗ್ ನೀಡಿದರು.

ರಾಜ್ಯದಲ್ಲಿ ಉಪಯೋಗವಾದ ಹಣ  ಎಲ್ಲಿಂದ ಬಂತು? ಯಾರಿಂದ ಬಂತು ಎಂಬ ತನಿಖೆ ಮಾಡಬಹುದಿತ್ತು. ಕುಮಾರಸ್ವಾಮಿ ಅವಧಿಯಲ್ಲಿ  ಟೆಲಿಫೋನ್ ಕದ್ದಾಲಿಕೆ ಕುರಿತು ಸಿಬಿಐಗೆ  ವಹಿಸಿದ್ರಿ. ಆದರೆ  ಟೆಲಿಫೋನ್ ನಲ್ಲಿರುವ ವಿಷಯದ ಬಗ್ಗೆಯೂ ತನಿಖೆ ಆಗಬೇಕಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಿ. ಆಪರೇಷನ್ ಕಮಲ ಯಾರು ಯಾರು  ಎಷ್ಟು ಕೊಟ್ಟಿದ್ದಾರೆ? ಎಲ್ಲವೂ ಹೊರ ಬರಲಿ. ಹೀಗಾಗಿ  ಕೇಂದ್ರ ಸರ್ಕಾರ ಈ ವಿಷಯ ಕುರಿತು ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.

ಡಿ.ಕೆ ಶಿವಕುಮಾರ್ ಅವರನ್ನು ಬೆಂಬಲಿಸುತ್ತೇವೆ. ಪಕ್ಷ ಬೇರೆ ಇದ್ದರೂ  ಬೆಂಬಲಿಸುತ್ತೇವೆ. ಡಿಕೆಶಿವಕುಮಾರ್  ವಿಚಾರದಲ್ಲಿ ಸಹಕಾರ ನೀಡಲು ಮುಂದಾಗಿದ್ದೇವೆ. ವಿರೋಧ ಪಕ್ಷದಲ್ಲಿ ಕುಳಿತು ಹೋರಾಟ ಮಾಡ್ತೇವೆ ಎಂದು ತಿಳಿಸಿದರು.

ದಸರಾ ಕಾರ್ಯಕ್ರಮಗಳಿಗೆ ಗೈರು : ಮಾಜಿ ಸಚಿವರ ಸ್ಪಷ್ಟನೆ

ದಸರಾ ಸಭೆಗಳಿಗೆ ಪಾಲ್ಗೊಳ್ಳುವಂತೆ ವಿ. ಸೋಮಣ್ಣ  ನನಗೂ ಫೋನ್ ಮಾಡಿದ್ರು. ಇದು ನಾಡ ಹಬ್ಬ  ನಮ್ಮೆಲ್ಲರ ಸಹಕಾರ ಇದೆ. ಜನರ ಸಂಪೂರ್ಣ ಆಶೀರ್ವಾದದಿಂದ ಆಡಳಿತಕ್ಕೆ ಬಂದು  ದಸರಾ ಆಚರಣೆ ಮಾಡಿದ್ರೆ  ಖಂಡಿತ ಬೆಂಬಲ ನೀಡ್ತಿದ್ವಿ. ಇಂದು ನಾವು ಕುಳಿತು ದಸರಾ ಮಾಡಬೇಕಿತ್ತು. ಅಂತಹುದರಲ್ಲಿ  ನಮ್ಮ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದವರು ದಸರಾ  ಮಾಡ್ತಿದ್ದಾರೆ,  ಅಂತವರ  ಪಕ್ಕ ಹೇಗೆ ಕುಳಿತುಕೊಳ್ಳೋದು ಎಂದು ಪ್ರಶ್ನಿಸಿದರು.

ಇದೊಂದೇ ವಿಷಯಕ್ಕೆ  ನಾವು ಪಾಲ್ಗೊಳ್ಳುತ್ತಿಲ್ಲ. ನಿಮ್ಮ ಜೊತೆಗೆ ಹೇಗೆ ಕುಳಿತು ಸಭೆ ನಡೆಸೋದು ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ ಅವರು, ದಸರಾಗೆ  ನಮ್ಮಿಂದ ಏನು ತೊಂದರೆ ಆಗಲ್ಲ,  ನಾಡ ಹಬ್ಬ ಸುಸೂತ್ರವಾಗಿ ನಡೆಯಬೇಕು. ನಾವು ಅಡ್ಡಿ ಪಡಿಸಲ್ಲ. ಇದು ಮೈಸೂರು ಭಾಗದಲ್ಲಿ  ನಾನು ತೆಗೆದುಕೊಂಡಿರೋ ತೀರ್ಮಾನ ಅಷ್ಟೇ ಎಂದರು.

ಮಾಜಿ ಸಚಿವ ಜಿ.ಟಿ ದೇವೇಗೌಡರು  ದಸರಾ ಸಭೆ,  ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಜಿಟಿದೇವೇಗೌಡರು ನಮ್ಮೆಲ್ಲರ ನಾಯಕ.  ಈ ವಿಚಾರದಲ್ಲಿ ಅವರ ಜೊತೆ ನಾನು  ಮಾತನಾಡಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಂಗೆ ಕರೆ ಮಾಡಲು  ಸಾಧ್ಯವಾಗಿಲ್ಲ. ಈ ಬಗ್ಗೆ  ಅವರನ್ನೇ ಕೇಳಿ ನಿಮಗೆ  ಹೇಳ್ತೀನಿ. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೇ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: