ದೇಶಪ್ರಮುಖ ಸುದ್ದಿ

ನಾಲ್ವರಿಗೆ ಉಗ್ರ ಪಟ್ಟ: ಭಾರತದ ನಿರ್ಧಾರವನ್ನು ಬೆಂಬಲಿಸಿದ ಅಮೆರಿಕಾ

ನವದೆಹಲಿ,ಸೆ.5-ಉಗ್ರರಾದ ಮಸೂದ್ ಅಝರ್, ಲಖ್ವಿ, ಹಫೀಜ್ ಸಯೀದ್ ಹಾಗೂ ದಾವೂದ್ ಇಬ್ರಾಹಿಂ ಹೆಸರನ್ನು `ಪ್ರತ್ಯೇಕ ಘೋಷಿತ ಉಗ್ರ’ರ ಪಟ್ಟಿಗೆ ಸೇರಿಸಿದ ಭಾರತದ ನಿಲುವನ್ನು ಅಮೆರಿಕಾ ಸ್ವಾಗತಿಸಿದೆ.

ಅಮೆರಿಕಾದ ದಕ್ಷಿಣ ಹಾಗೂ ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಎಲೈಸ್ ಜಿ ವೇಲ್ಸ್, ಭಾರತ ತನ್ನ ಕಾನೂನಿನ ಅನ್ವಯ ಅಝರ್, ಸಯೀದ್, ಲಖ್ವಿ, ಹಾಗೂ ದಾವೂದ್ ರನ್ನ ಭಯೋತ್ಪಾದಕರೆಂದು ಹೆಸರಿಸಿದೆ. ಅಮೆರಿಕಾ ಇದನ್ನು ಬೆಂಬಲಿಸುತ್ತದೆ ಹಾಗೂ ಅದನ್ನು ಪ್ರಶಂಸಿಸುತ್ತದೆ. ನಾವು ಭಾರತದ ಪರ ನಿಲ್ಲುತ್ತೇವೆ. ಉಗ್ರ ನಿಗ್ರಹಕ್ಕೆ ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತೇವೆ. ಭಾರತದ ಈ ದಿಟ್ಟ ಕ್ರಮ ಉಗ್ರರನ್ನು ಮಟ್ಟಹಾಕಲು ಭಾರತ ಹಾಗೂ ಅಮೆರಿಕಾ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಗೆ ಸಹಾಯಕವಾಗಲಿದೆ ಎಂದು ಟ್ವಿಟ್ ಮಾಡಿದ್ದಾರೆ.

ಲಷ್ಕರ್-ಎ-ತೊಯ್ಬಾ ಅಧಿನಾಯಕ ಹಫೀಜ್ ಸಯೀದ್, ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್, ಲಷ್ಕರ್-ಎ-ತೊಯ್ಬಾದ ಕಾಶ್ಮೀರ ಪ್ರಾಂತ್ಯದ ಕಾರ್ಯಾಚರಣೆ ಮುಖ್ಯಸ್ಥ ಝಾಕಿ-ಉರ್-ರೆಹಮಾನ್ ಹಾಗೂ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂನನ್ನು ಭಯೋತ್ಪಾದಕ ಎಂದು ಭಾರತ ಹೆಸರಿಸಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ತಿದ್ದುಪಡಿ ಕಾನೂನಿನ ಅನ್ವಯ ಈ ಅಧಿಸೂಚನೆ ಹೊರಡಿಸಲಾಗಿದೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ತಿದ್ದುಪಡಿ ಕಾನೂನಿನಿಂದಾಗಿ ಭಾರತ ಉಗ್ರರ ಹೆಸರುಗಳನ್ನು ಪ್ರತ್ಯೇಕವಾಗಿ ಸೇರಿಸಬಹುದಾಗಿದೆ. ಅಮೆರಿಕಾದಲ್ಲಿರುವ ಇದೇ ರೀತಿಯ ಕಾನೂನಿಗೆ ಹೊಂದಾಣಿಕೆಯಾಗುವ ಕಾರಣ, ಉಭಯ ದೇಶಗಳು ಉಗ್ರರ ವಿರುದ್ಧ ಹೋರಾಡಲು ಕಾನೂನಿನ ನೆರವು ಲಭ್ಯವಾಗುತ್ತೆ.

ಪಾಕಿಸ್ತಾನದಲ್ಲಿರುವ ನಾಲ್ವರು ಮಹಾ ಉಗ್ರರನ್ನು ಜಾಗತಿಕ ಭಯೋತ್ಪಾದಕರೆಂದು ಘೋಷಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ಮನವಿ ಮಾಡಿತ್ತು. ಆದ್ರೆ, ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಅಡ್ಡಿಪಡಿಸಿತ್ತು. ಅಂತಾರಾಷ್ಟ್ರೀಯ ಸಮುದಾಯದ ಒತ್ತಡದಿಂದಾಗಿ ಚೀನಾ ತನ್ನ ಬಿಗಿಪಟ್ಟಿನಿಂದ ಹಿಂದೆ ಸರಿಯಿತು. ಇದೀಗ ನಾಲ್ವರು ಉಗ್ರ ನಾಯಕರು ಸೇರಿದಂತೆ ಕುಖ್ಯಾತ ಉಗ್ರ ಸಂಘಟನೆಗಳೆಲ್ಲಾ ಜಾಗತಿಕ ಉಗ್ರರ ಪಟ್ಟಿಯಲ್ಲಿವೆ.

ಕಳೆದ ತಿಂಗಳು ಸಂಸತ್ತಿನಲ್ಲಿ ಅನುಮೋದನೆಗೊಂಡ ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ಕಾಯ್ದೆಯನ್ವಯ ಕೇಂದ್ರ ಗೃಹ ಇಲಾಖೆ ಮೊದಲ ಬಾರಿಗೆ ವ್ಯಕ್ತಿಗತ ಉಗ್ರರ ಪಟ್ಟಿಯನ್ನು ಘೋಷಣೆ ಮಾಡಿದೆ. ಈ ಹಿಂದಿನ ಯುಎಪಿಎ ಕಾಯ್ದೆಯ ಅನ್ವಯ ಗುಂಪನ್ನು ಮಾತ್ರವೇ ಉಗ್ರ ಸಂಘಟನೆ ಎಂದು ಘೋಷಿಸಬಹುದಿತ್ತು. ಆದರೆ, ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಇದೀಗ ಒಬ್ಬ ವ್ಯಕ್ತಿಯನ್ನು ಕೂಡಾ ಉಗ್ರ ಎಂದು ಪರಿಗಣಿಸಬಹುದಾಗಿದೆ. (ಎಂ.ಎನ್)

Leave a Reply

comments

Related Articles

error: