ದೇಶಪ್ರಮುಖ ಸುದ್ದಿ

ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ,ಸೆ.5-ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಚಿದಂಬರಂ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಆರ್.ಭಾನುಮತಿ ಹಾಗೂ ಎ.ಎಸ್.ಬೋಪಣ್ಣ ಪೀಠ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಈ ಹಿಂದೆ ದಿಲ್ಲಿ ಹೈಕೋರ್ಟ್ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಚಿದು ಸುಪ್ರೀಂ ಮೆಟ್ಟಿಲೇರಿದ್ದರು. ಚಿದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಡಿ ತನಿಖೆ ನಡೆಯುತ್ತಿರುವ ಹಂತದಲ್ಲಿ ಚಿದಂಬರಂ ಅವರಿಗೆ ಜಾಮೀನು ಕೊಟ್ಟರೆ, ಅವರಿಂದ ತನಿಖಾ ಪ್ರಗತಿಗೆ ಅಡ್ಡಿಯಾಗಬಹುದು ಎಂದು ಅಭಿಪ್ರಾಯಪಟ್ಟಿದೆ. ತನಿಖಾ ಸಂಸ್ಥೆಗೆ ಈ ಸಂದರ್ಭದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಹಿಂದೆ ಸುಪ್ರೀಂ ಕೋರ್ಟ್, ಚಿದಂಬರಂ ಅವರನ್ನು ಸೆ.3ರವರೆಗೂ ಸಿಬಿಐ ವಶಕ್ಕೆ ನೀಡಿತ್ತು. ತನಿಖಾ ಸಂಸ್ಥೆಗಳ ವಿಚಾರಣೆ ಮುಕ್ತಾಯಗೊಳ್ಳುವವರೆಗೂ ಚಿದಂಬರಂ ಅವರ ಬಿಡುಗಡೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಈಗಲೂ ಚಿದಂಬರಂ ಸಿಬಿಐ ವಶದಲ್ಲೇ ಇದ್ದಾರೆ. ಒಂದು ವೇಳೆ ಸಿಬಿಐ ವಶದಿಂದ ಚಿದು ಮುಕ್ತವಾದರೆ ಕೂಡಲೇ ಜಾರಿ ನಿರ್ದೇಶನಾಲಯ ಚಿದು ಅವರನ್ನು ವಶಕ್ಕೆ ಪಡೆಯಲಿದೆ.

2017ರ ಮೇ 15 ರಂದು ಸಿಬಿಐ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿತ್ತು. ಐಎನ್ಎಕ್ಸ್ ಮಾಧ್ಯಮ ಸಮೂಹ ವಿದೇಶದಿಂದ 305 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲು ಚಿದು ಅವಕಾಶ ಕೊಟ್ಟಿದ್ದರು. 2007ರಲ್ಲಿ ಹಣಕಾಸು ಸಚಿವರಾಗಿದ್ದ ವೇಳೆ ಚಿದಂಬರಂ ಈ ಅಕ್ರಮಕ್ಕೆ ಅವಕಾಶ ನೀಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣ ನಡೆದು 10 ವರ್ಷಗಳ ಬಳಿಕ ಸಿಬಿಐ ಹಾಗೂ ಇಡಿ ಪ್ರತ್ಯೇಕವಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದವು. (ಎಂ.ಎನ್)

Leave a Reply

comments

Related Articles

error: