ದೇಶಪ್ರಮುಖ ಸುದ್ದಿ

ಮೆಹಬೂಬಾ ಮುಫ್ತಿಯನ್ನು ಭೇಟಿಯಾಗಲು ಪುತ್ರಿಗೆ ಅನುಮತಿ ನೀಡಿದ ಸುಪ್ರೀಂ

ನವದೆಹಲಿ,ಸೆ.5-ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಲು ಪುತ್ರಿ ಸನಾ ಇಲ್ಟಿಜಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.

ಕಳೆದ ಒಂದು ತಿಂಗಳಿನಿಂದ ತನ್ನ ತಾಯಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಿಲ್ಲ. ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಅವರ ಭೇಟಿಗೆ ಅನುಮತಿ ನೀಡಬೇಕೆಂದು ಸನಾ ಇಲ್ಟಿಜಾ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಇಲ್ಟಿಜಾ ತನ್ನ ತಾಯಿಯನ್ನು ಭೇಟಿಯಾಗಲು ಮತ್ತು ಸ್ವತಂತ್ರವಾಗಿ ಶ್ರೀನಗರ ಸುತ್ತುವುದಕ್ಕೆ ನಾವು ಅನುಮತಿ ನೀಡುತ್ತೇವೆ ಎಂದು ಹೇಳಿದರು.

ಮುಫ್ತಿ ಅವರ ಕುಟುಂಬದ ಇತರ ಸದಸ್ಯರು ಈಗಾಗಲೇ ಎರಡು ಬಾರಿ ಪಿಡಿಪಿ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ ಮತ್ತು ಇಲ್ಟಿಜಾ ಕೂಡ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ತಾಯಿಯನ್ನು ಭೇಟಿಯಾಗಲು ಅನುಮತಿ ಪಡೆಯಬಹುದು ಎಂದು ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ವೇಳೆ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.

ಎಜಿ ಕೆ.ಕೆ.ವೇಣುಗೋಪಾಲ್ ಅವರು ಮೆಹಬೂಬಾ ಮುಫ್ತಿ ಅವರ ತಾಯಿ ಮತ್ತು ಸಹೋದರಿ ಎರಡು ಬಾರಿ ಭೇಟಿ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿಗಳಿಗೆ ಬೇರೆ ಉದ್ದೇಶವಿದೆ ಎಂದು ಹೇಳಿದರು.

ಇಲ್ಟಿಜಾ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲ ನಿತ್ಯ ರಾಮಕೃಷ್ಣನ್, ಆಗಸ್ಟ್ 22 ರವರೆಗೆ ಇಲ್ಟಿಜಾ ಮನೆಯಿಂದ ಹೊರಹೋಗುವುದನ್ನು ಸಹ ನಿರ್ಬಂಧಿಸಲಾಗಿದೆ. ಅದಕ್ಕಾಗಿಯೇ ಅವರು ರಾಜ್ಯವನ್ನು ತೊರೆಯಬೇಕಾಯಿತು ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರು [ಇಲ್ಟಿಜಾ] ಚೆನ್ನೈನಿಂದ ಶ್ರೀನಗರಕ್ಕೆ ಹೋಗುವುದನ್ನು ನಿಲ್ಲಿಸಿದ್ದು ಯಾಕೆ ಎಂದು ಕೇಳಿದಾಗ, ನಿತ್ಯ ರಾಮಕೃಷ್ಣನ್ ಅವರು ಆಗಸ್ಟ್ 5 ರಿಂದ 22 ರವರೆಗೆ ಬೆದರಿಕೆ ಕಾರಣದಿಂದಾಗಿ ಹೋಗಿಲ್ಲ ಎಂದರು. (ಎಂ.ಎನ್)

Leave a Reply

comments

Related Articles

error: