ಕರ್ನಾಟಕಮೈಸೂರು

ಗಾಯಾಳುಗಳು ಶೀಘ್ರ ಗುಣಮುಖರಾಗಲಿದ್ದಾರೆ, ಖರ್ಚು-ವೆಚ್ಚ ಸರ್ಕಾರವೇ ಭರಿಸಲಿದೆ : ಬಿ.ರಮಾನಾಥ ರೈ

ಬಂಡಿಪುರ ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಾಯಗೊಂಡಿದ್ದ ಗಾಯಾಳುಗಳು ಚೇತರಿಕೆ ಕಾಣುತ್ತಿದ್ದಾರೆ. ಮೂವರು ಸಿಬ್ಬಂದಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಶೀಘ್ರ ಗುಣಮುಖರಾಗಲಿದ್ದಾರೆ ಎಂದು ರಾಜ್ಯ ಅರಣ್ಯ ಇಲಾಖೆ ಸಚಿವ ಬಿ.ರಮಾನಾಥ್ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕುವೆಂಪುನಗರದಲ್ಲಿರುವ ಅಪೊಲೋ ಆಸ್ಪತ್ರೆಗೆ ಭೇಟಿ  ನೀಡಿದ ಸಚಿವ ರಮಾನಾಥ ರೈ, ‌ ಗಾಯಾಳುಗಳಾದ ಆರ್.ಎಫ್.ಓ ಗಂಗಾಧರ್ , ವಾಚರ್ ಗಳಾದ ಮನು ಮತ್ತು ಮಂಜು ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಅವರ ಆರೋಗ್ಯ ಖರ್ಚು ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ. ಅಲ್ಲದೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಅವರಿಗೆ ಸಿಗುವಂತೆ ನೋಡಿಕೊಳ್ಳುತ್ತೇವೆ.ಘಟನೆಯಲ್ಲಿ ಮೃತಪಟ್ಟ ಮುರುಗೆಪ್ಪ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತೇನೆ. ಅರಣ್ಯ ಇಲಾಖೆಯ ಸಮಸ್ಯೆ ಹಾಗೂ ಘಟನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಅವರ ಎಲ್ಲ ಬೇಡಿಕೆಗಳನ್ನು ಪರಿಶೀಲನೆ ಮಾಡುತ್ತೇವೆ ಎಂದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಹೇಗೆ ಹರಡಿತು. ಅದಕ್ಕೆ ಕಾರಣವೇನು ಎನ್ನುವುದು ಇದುವರೆಗೂ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳ ತಂಡ ರಚಿಸಲಾಗುವುದು. ಈಗಾಗಲೇ ಕಾಡ್ಗಿಚ್ಚು, ಹತೋಟಿಗೆ ಬಂದಿದೆ. ಬಂಡೀಪುರ, ನಾಗರಹೊಳೆ ಕಾಡಿನಲ್ಲಿ ಲಂಟಾನ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ವೇಗವಾಗಿ ವ್ಯಾಪಿಸಿದೆ. ವೈಜ್ಞಾನಿಕವಾಗಿ ಲಂಟಾನ ನಿಯಂತ್ರಣ ಸಾಧ್ಯವಿಲ್ಲ. ಆದರೂ ಫೈರ್ ಲೈನ್ ವಿಸ್ತರಣೆ ಸೇರಿದಂತೆ ಕಾಡ್ಗಿಚ್ಚು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಅರಣ್ಯ ಇಲಾಖೆಯಲ್ಲಿ  ನೌಕರರ ಕೊರತೆ ಇದೆ. ಆದ್ದರಿಂದ ಸ್ಥಳೀಯರನ್ನು ವಾಚರ್, ಗಾರ್ಡ್​ಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ.  ಸದ್ಯ ಒಂದು ಬ್ಯಾಚ್ ತರಬೇತಿಯಲ್ಲಿದೆ. ಅವರು ಕರ್ತವ್ಯಕ್ಕೆ ಹಾಜರಾದರೆ ಅರ್ಧದಷ್ಟು ಸಮಸ್ಯೆ ನಿವಾರಣೆಯಾಗಲಿದೆ. ಅರಣ್ಯ ಇಲಾಖೆಯಲ್ಲಿ ಕಾಡ್ಗಿಚ್ಚು ನಂದಿಸಲು ಆಧುನಿಕ ಪರಿಕರಗಳು ಇಲ್ಲ ಎಂಬುದು ನಿಜ. ಆದರೆ,  ಯುರೋಪ್ ರಾಷ್ಟ್ರಗಳಲ್ಲಿ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ವ್ಯವಸ್ಥೆ ಇದೆ. ಆದರೆ ನಮ್ಮ ರಾಷ್ಟ್ರಕ್ಕೂ ಯುರೋಪ್ ರಾಷ್ಟ್ರಗಳಿಗೂ ಹೋಲಿಕೆ ಮಾಡುವುದು ಸರಿಯಲ್ಲ. ನಮ್ಮ ಇತಿಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿಯ ರಕ್ಷಣೆ ದೃಷ್ಟಿಯಿಂದ ಗರಿಷ್ಠ ಸವಲತ್ತುಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಬಂಡೀಪುರ ಕಾಡ್ಗಿಚ್ಚಿನಲ್ಲಿ ಮೃತಪಟ್ಟ ಮುರುಗಪ್ಪ ಅವರ ಕುಟುಂಬದವರಿಗೆ ಹುಲಿ ಫೌಂಡೇಷನ್​ನಿಂದ 25 ಲಕ್ಷ ರೂ. ಪರಿಹಾರ ನೀಡಲಾಗುವುದು. ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಲು ಪರಿಶೀಲನೆ ನಡೆಸಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿಗೆ ಪೊಲೀಸ್ ಇಲಾಖೆಗೆ ಸಮನಾದ ಪರಿಹಾರ ನೀಡುವ ಬಗ್ಗೆ ಭವಿಷ್ಯದಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುವುದು. ಇದೇವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಮಾತನಾಡಿ, ಬಂಡೀಪುರ ಕಾಡ್ಗಿಚ್ಚಿನಲ್ಲಿ ಗಾಯಗೊಂಡ ಮೂವರಿಗೂ ಶೇ.18ರಿಂದ 25ರಷ್ಟು ಸುಟ್ಟ ಗಾಯಗಳಾಗಿವೆ. ವೈದ್ಯಾಧಿಕಾರಿಗಳು ಅಗತ್ಯ ಚಿಕಿತ್ಸೆ ನೀಡುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ. ಸದ್ಯ ಕಾಡ್ಗಿಚ್ಚಿನಲ್ಲಿ ಗಾಯಗೊಂಡವರ ಆರೋಗ್ಯ ಪರಿಶೀಲನೆ ನಡೆಸಿದ್ದೇವೆ. ರಾಜ್ಯ ಸರ್ಕಾರದ ವತಿಯಿಂದ ಚಿಕಿತ್ಸೆಗೆ ಬೇಕಾದ ಎಲ್ಲ ಅಗತ್ಯತೆಗಳನ್ನು ಗಾಯಾಳುಗಳಿಗೆ ಪೂರೈಸಲಾಗುವುದು. ಚಿಕಿತ್ಸಾ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಬರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು. ಇದೇವೇಳೆ‌ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

comments

Related Articles

error: