ದೇಶಪ್ರಮುಖ ಸುದ್ದಿ

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ

ಹೈದರಾಬಾದ್,ಸೆ.5- ಐವಿಎಫ್ ಅಥವಾ ಗರ್ಭ ಕಸಿ ತಂತ್ರಜ್ಞಾನದ ಮೂಲಕ 74 ವರ್ಷದ ಮಹಿಳೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಇಂದು ಜನ್ಮ ನೀಡಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊತ್ತಪೇಟ್ ಎಂಬಲ್ಲಿನ ಅಹಲ್ಯಾ ಆಸ್ಪತ್ರೆಯಲ್ಲಿ ದ್ರಾಕ್ಷರಾಮಂ ಬ್ಲಾಕಿನ ನೆಲಪರ್ತಿಪಡು ಗ್ರಾಮದ 80 ವರ್ಷದ ರಾಜಾ ರಾವ್ ಅವರ ಪತ್ನಿ ಎರ್ರಮತ್ತಿ ಮಂಗಯಮ್ಮ ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಇಂದು ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸನಕಯ್ಯಲ ಉಮಾಶಂಕರ್ ಹೇಳಿದ್ದಾರೆ.

ಬೇರೊಬ್ಬ ದಾನಿಯ ಅಂಡಾಣು ಹಾಗೂ ರಾಜಾ ರಾವ್ ಅವರ ವೀರ್ಯಾಣು ಪಡೆದು ಐವಿಎಫ್ ತಂತ್ರಜ್ಞಾನದ ಮೂಲಕ ಮಂಗಯಮ್ಮ ಜನವರಿಯಲ್ಲಿ ಗರ್ಭವತಿಯಾದರು. ಮಂಗಯಮ್ಮಗೆ ಮಧುಮೇಹ ಅಥವಾ ರಕ್ತದೊತ್ತಡದಂತಹ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ ಇದ್ದುದರಿಂದ ಗರ್ಭ ಧರಿಸಲು ಹಾಗೂ ಮಗು ಹೆರಲು ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಆಕೆಗೆ ಮಗುವಿಗೆ ಎದೆ ಹಾಲೂಡಲು ಸಾಧ್ಯವಿಲ್ಲ. ಹಾಲಿನ ಬ್ಯಾಂಕ್ ನಿಂದ ಹಾಲು ಪಡೆದು ಮಗುವಿಗೆ ನೀಡಬಹುದು ಎಂದು ವೈದರು ಹೇಳಿದ್ದಾರೆ.

ಮಕ್ಕಳನ್ನು ಹೆತ್ತ ಅತ್ಯಂತ ಹಿರಿಯ ವಯಸ್ಸಿನ ಭಾರತೀಯ ಮಹಿಳೆ ಈಕೆಯಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಹಿಂದೆ 2016ರಲ್ಲಿ ಪಂಜಾಬ್ ರಾಜ್ಯದ 70 ವರ್ಷದ ಮಹಿಳೆ ದಲ್ಜಿಂದರ್ ಮಗುವಿಗೆ ಜನ್ಮ ನೀಡಿದ್ದ ಭಾರತದ ಅತ್ಯಂತ ಹಿರಿಯ ಮಹಿಳೆಯಾಗಿದ್ದರು.

ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ರಾಜಾ ರಾವ್, ಮಂಗಯಮ್ಮ ದಂಪತಿಗೆ 1962 ರ ಮಾರ್ಚ್ 22 ರಂದು ವಿವಾಹವಾಗಿತ್ತು. 57 ವರ್ಷಗಳಿಂದ ಅವರು ಮಕ್ಕಳಿಲ್ಲದೆ ಕೊರಗುತ್ತಿದ್ದರು. ಕಳೆದ ವರ್ಷ ಅವರ ನೆರೆಮನೆಯ 55 ವರ್ಷದ ಮಹಿಳೆ ಐವಿಎಫ್ ಮೂಲಕ ಗರ್ಭವತಿಯಾಗಿದ್ದಾರೆಂದು ತಿಳಿದು ದಂಪತಿ ವೈದ್ಯರನ್ನು ಸಂಪರ್ಕಿಸಿದ್ದರು. (ಎಂ.ಎನ್)

Leave a Reply

comments

Related Articles

error: