ಪ್ರಮುಖ ಸುದ್ದಿ

ಸಂತ್ರಸ್ತರಿಗೆ ತುರ್ತಾಗಿ ತಲಾ 1 ಲಕ್ಷ ರೂ. ನೆರವು ನೀಡಲು ಸಿಪಿಐಎಂ ಆಗ್ರಹ

ರಾಜ್ಯ( ಮಡಿಕೇರಿ) ಸೆ.6 :- ಮಹಾಮಳೆಗೆ ಮನೆಗಳು ಕುಸಿದು ನೆಲೆ ಕಳೆದುಕೊಂಡಿರುವ ಬಡವರ್ಗದ ಸಂತ್ರಸ್ತರಿಗೆ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ನಿವೇಶನ ಒದಗಿಸಬೇಕು ಮತ್ತು ತುರ್ತಾಗಿ ತಲಾ ಒಂದು ಲಕ್ಷ ರೂ. ನೆರವನ್ನು ವಿತರಿಸಬೇಕೆಂದು ಸಿಪಿಐಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಇ.ರಾ.ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಾಶ್ರಿತ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ತಕ್ಷಣ ನೆರವು ನೀಡಬೇಕೆಂದು ಒತ್ತಾಯಿಸಿದರು. ಕೇವಲ ಸಚಿವ ಸ್ಥಾನಕ್ಕಾಗಿ ಚಿಂತನೆ ಹರಿಸುತ್ತಿರುವ ಜಿಲ್ಲೆಯ ಶಾಸಕರುಗಳ ನಿರ್ಲಕ್ಷ್ಯ ಧೋರಣೆಯನ್ನು ಗಮನಿಸಿದರೆ ಸಂತ್ರಸ್ತರು ತಮ್ಮ ಹಕ್ಕಿಗಾಗಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಟೀಕಿಸಿದರು.
ಸಂತ್ರಸ್ತರು ನಡೆಸುವ ಎಲ್ಲಾ ಹೋರಾಟಗಳಿಗೆ ಸಿಪಿಐಎಂ ಪಕ್ಷ ಬೆಂಬಲ ನೀಡಲಿದೆ ಎಂದರು.
ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ವಾಸಿಸುತ್ತಿರುವ ಸಂತ್ರಸ್ತರನ್ನು ಪರಿಹಾರ ಕೇಂದ್ರದಿಂದ ಹೊರದಬ್ಬುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸೂಕ್ತ ನೆಲೆ ದೊರಕುವಲ್ಲಿಯವರೆಗೆ ಪರಿಹಾರ ಕೇಂದ್ರಗಳಿಂದ ಯಾರನ್ನೂ ಕಳುಹಿಸಬಾರದೆಂದು ಒತ್ತಾಯಿಸಿದರು.
ಸಂತ್ರಸ್ತರಿಗೆ ಮನೆ ಬಾಡಿಗೆ ಮಾಸಿಕ ತಲಾ 5 ಸಾವಿರ ರೂ. ನೀಡಲಾಗುವುದೆಂದು ಅಧಿಕಾರಿಗಳು ಕೇವಲ ಹೇಳಿಕೆ ನೀಡುತ್ತಿದ್ದಾರಷ್ಟೆ, ಆದರೆ ಘೋಷಣೆ ಜಾರಿಗೆ ಬಂದಿಲ್ಲವೆಂದು ಆರೋಪಿಸಿದರು.
ಬಾಡಿಗೆ ಹಣದ ಮೊತ್ತವನ್ನು 10 ಸಾವಿರ ರೂ. ಗಳಿಗೆ ಏರಿಕೆ ಮಾಡಬೇಕು ಮತ್ತು ಬಾಡಿಗೆ ಮನೆಗಳ ಮುಂಗಡ ಹಣವನ್ನು ಕೂಡ ಸರಕಾರವೇ ಭರಿಸಬೇಕೆಂದು ಒತ್ತಾಯಿಸಿದ ಅವರು, ಭರವಸೆಗಳು ಬರವಣಿಗೆ ರೂಪದಲ್ಲಿ ಅಧಿಕೃತವಾಗಿ ಇರಲಿ ಎಂದರು.
ಫೋಟೋಗೆ ಬೆಲೆ
ಸಿದ್ದಾಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರವಾಹದಿಂದ ಇಡೀ ಮನೆಯೇ ಕುಸಿದಿದ್ದರೂ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿ ತೋರಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಹಾನಿಯ ಫೋಟೋಗಳನ್ನು ನೋಡಿ ನಷ್ಟದ ಪ್ರಮಾಣವನ್ನು ಅಂದಾಜಿಸುತ್ತಿದ್ದಾರೆ ಎಂದು ದುರ್ಗಾಪ್ರಸಾದ್ ಆರೋಪಿಸಿದರು.
ಸಾಲಮನ್ನಾ ಮಾಡಿ
ಜಿಲ್ಲೆಯ ರೈತರು, ಸಣ್ಣ ಬೆಳೆಗಾರರು ಮಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರುಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಸುಲಭ ಬಡ್ಡಿ ದರದಲ್ಲಿ ಹೊಸ ಸಾಲ ವಿತರಿಸಬೇಕು, ಭತ್ತಕ್ಕೆ ಬೆಂಬಲ ಬೆಲೆಯಾಗಿ 3 ಸಾವಿರ ರೂ.ಗಳನ್ನು ಘೋಷಿಸಬೇಕೆಂದು ಅವರು ಒತ್ತಾಯಿಸಿದರು.
ಮಳೆಗಾಲದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ಹಲವು ಸಭೆಗಳನ್ನು ನಡೆಸಿ ಜನರಲ್ಲಿ ಭರವಸೆ ಮೂಡಿಸಿದ್ದರು. ಆದರೆ ಮಹಾಮಳೆ ಮತ್ತು ಪ್ರವಾಹದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ ಅನೇಕರನ್ನು ಅಧಿಕಾರಿಗಳ ತಂಡದ ಬದಲಾಗಿ ಸಾರ್ವಜನಿಕರೇ ರಕ್ಷಿಸಿದ್ದಾರೆ ಎಂದು ದುರ್ಗಾಪ್ರಸಾದ್ ಟೀಕಿಸಿದರು.
ಪರಿಹಾರ ಕೇಂದ್ರಗಳಲ್ಲೂ ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ಒದಗಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು, ಸಿದ್ದಾಪುರ ಪರಿಹಾರ ಕೇಂದ್ರದಲ್ಲಿದ್ದ 90 ಮಂದಿ ಸಂತ್ರಸ್ತರಿಗೆ ಕೇವಲ ಒಂದು ಸ್ನಾನದ ಕೊಠಡಿ ಮತ್ತು ಒಂದು ಶೌಚಗೃಹವನ್ನಷ್ಟೇ ಒದಗಿಸಲಾಗಿತ್ತು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಂಘಟನಾ ಸಮಿತಿ ಸದಸ್ಯರಾದ ಎ.ಸಿ.ಸಾಬು ಹಾಗೂ ಹೆಚ್.ಬಿ.ರಮೇಶ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: