ಪ್ರಮುಖ ಸುದ್ದಿಮೈಸೂರು

ನಾಡಹಬ್ಬ ದಸರಾದಲ್ಲಿ ವಿವಿಧ ರಾಜ್ಯಗಳ ಖಾದ್ಯ ಸವಿಯುವ ಅವಕಾಶ ; ದಸರಾ ಕ್ರೀಡಾಕೂಟ-ಯುವ ದಸರಾ ಉದ್ಘಾಟಿಸಲಿದ್ದಾರೆ ಬ್ಯಾಡ್ ಮಿಂಟನ್ ತಾರೆ ಪಿ.ವಿ.ಸಿಂಧು

ಮೈಸೂರು,ಸೆ.6:- ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಹೆಚ್ಚಿನ ಗಮನ ಸೆಳೆಯುವ ಆಹಾರ ಮೇಳದಲ್ಲಿ ಈ ಬಾರಿ  ಕೇವಲ ರಾಜ್ಯ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳ ಖಾದ್ಯದ ಸವಿಯನ್ನೂ ಸವಿಯಬಹುದು. ಜತೆಗೆ ಆಯಾ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಕಣ್ತುಂಬಿಕೊಳ್ಳಬಹುದಾಗಿದೆ.

ನಿನ್ನೆ ಜಿ.ಪಂ.ಸಭಾಂಗಣದಲ್ಲಿ  ದಸರಾ ಉಪ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ ಈ ಬಾರಿ ಆಹಾರ ಮೇಳದಲ್ಲಿ ಹೊರ ರಾಜ್ಯದ ಖಾದ್ಯಗಳಿಗೆ ಪ್ರತ್ಯೇಕ ಮಳಿಗೆ ನಿರ್ಮಿಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪ್ರತಿಕ್ರಿಯಿಸಿ ಹೊರ ರಾಜ್ಯದವರಿಗೆ 20 ಮಳಿಗೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳು ಈ ಬಾರಿಯ ಆಹಾರ ಮೇಳದಲ್ಲಿ ಭಾಗವಹಿಸಲಿವೆ. ಪ್ರತಿ ದಿನ ಒಂದು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಹಾರ ಮೇಳದಲ್ಲಿ ಆಯೋಜಿಸಲಾಗುವುದು ಎಂದರು.

ಮೈಸೂರು ಜಿಲ್ಲೆಯಲ್ಲಿರುವ ಟಿಬೆಟಿಯನ್ನರು ಸಾಕಷ್ಟು ಬಾರಿ ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಇದೇ ಪ್ರಥಮ ಬಾರಿಗೆ ಟಿಬೆಟಿಯನ್ನರ ಆಹಾರವನ್ನು ಸವಿಯುವ ಅವಕಾಶ ಕಲ್ಪಿಸಲು ಆಹಾರ ಉಪ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ  ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅಂಬಾರಿ ಮೆರವಣಿಗೆಗೆ ಯಾವುದೇ ಅಡ್ಡಿ ಆತಂಕ ಎದುರಾಗದ ರೀತಿಯಲ್ಲಿ ಸೂಕ್ತ ಭದ್ರತೆ ಒದಗಿಸಬೇಕೆಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರಿಗೆ ಸೂಚಿಸಿದ ಸಚಿವ ವಿ.ಸೋಮಣ್ಣ ,ಅಂಬಾರಿ ಮೆರವಣಿಗೆ ಸಂದರ್ಭದಲ್ಲಿ ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಳ್ಳುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಬಾರಿ ರಾಜಕಾರಣಿಗಳು ಅಂಬಾರಿ ಬಳಿ ಸುಳಿಯದ ಹಾಗೆ ಎಚ್ಚರ ವಹಿಸಬೇಕು ಎಂದರು.

ಕೆಲವು ವರ್ಷಗಳ ಹಿಂದೆ ಬೆಳಗಿನಿಂದ ಸಂಜೆವರೆಗೂ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸುವ ‘ಡಾನ್ ಟು ಡಸ್ಕ್’ ಮುಂಜಾನೆಯಿಂದ ಮುಸ್ಸಂಜೆವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಮತ್ತೆ ಅರಮನೆ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.

ದಸರಾ ಕ್ರೀಡಾಕೂಟ-ಯುವದಸರಾ  ಉದ್ಘಾಟನೆಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಈ ಬಾರಿಯ ದಸರಾ ಕ್ರೀಡಾಕೂಟ ಹಾಗೂ ಯುವ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಕ್ರೀಡಾಕೂಟ ಹಾಗೂ ಯುವ ದಸರಾ ಉದ್ಘಾಟನೆಯನ್ನು ಒಂದೇ ದಿನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ದಸರಾ ಉತ್ಸವದಲ್ಲಿ ಗ್ರಾಮೀಣ ಭಾಗದ ಜನರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಹೀಗಾಗಿ ಗ್ರಾಮೀಣ ಭಾಗದ ಜನರನ್ನು ನಗರಕ್ಕೆ ಕರೆ ತರಲು ದಸರಾ ದರ್ಶನ ಕಾರ್ಯಕ್ರಮವನ್ನು ಈ ಬಾರಿಯೂ ಹಮ್ಮಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಂದ 50 ರೂ. ಶುಲ್ಕ ಸಂಗ್ರಹಿಸುವುದನ್ನು ಕೈ ಬಿಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ನನ್ನ ಪ್ರತಿಷ್ಠಾನದಿಂದ ಭರಿಸುತ್ತೇನೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಈ ಬಾರಿ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರು ನಾಡಹಬ್ಬ ದಸರಾ ಉದ್ಘಾಟಿಸಲಿದ್ದು,  ಅವರ ಎಲ್ಲ ಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಪ್ರತ್ಯೇಕ ಮಳಿಗೆ ತೆರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮುಡಾ ಆಯುಕ್ತ ಪಿ.ಎಸ್. ಕಾಂತರಾಜ್, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: