ಮೈಸೂರು

ಅಪ್ರಾಪ್ತ ಬಾಲಕಿ ಮೇಲೆ ಯುವಕನಿಂದ ಹಲ್ಲೆ : ಠಾಣೆಗೆ ದೂರು ನೀಡಲು ಹೋದ ಬಾಲಕಿಯೊಂದಿಗೆ ಉದ್ಧಟವರ್ತನೆ ತೋರಿದ ಪೊಲೀಸರು; ಬಾಲಕಿಯರಿಗೆ ರಕ್ಷಣೆಯಿಲ್ಲವೇ?

ಮೈಸೂರು,ಸೆ.6:- ಮೈಸೂರಿನ ಗಾಂಧಿ ಚೌಕ ಬಳಿ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೋರ್ವ ತನ್ನ ಸಹಚರನ ಜೊತೆ ಸೇರಿಕೊಂಡು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದಿದ್ದು, ಪೊಲೀಸ್ ಠಾಣೆಗೆ ಬಾಲಕಿ ದೂರು ನೀಡಲು ತೆರಳಿದರೆ ನೀನು ಅಪ್ರಾಪ್ತೆ, ಬಲ್ಲವರಿಂದಲೇ ದೂರು ಕೊಡಿಸುವಂತೆ ಹೇಳು ಎಂದು ಬಾಲಕಿಯೊಂದಿಗೆ ಪೊಲೀಸರು ಉದ್ಧಟವರ್ತನೆ ತೋರಿದ ಘಟನೆ ದೇವರಾಜ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಸುಧಾ(ಹೆಸರು ಬದಲಾಯಿಸಲಾಗಿದೆ)ಎಂಬಾಕೆ ಸೆ.2ರಂದು ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ರಾಜಸ್ಥಾನ ವಿಷ್ಣು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ದೇವರ ದರ್ಶನ ಮುಗಿಸಿಕೊಂಡು ಚಿಕ್ಕಪ್ಪನ ಪತ್ನಿ, ಅಕ್ಕನ ಜೊತೆ ರಿಕ್ಷಾದಲ್ಲಿ ತೆರಳುವಾಗ ಮಧ್ಯಾಹ್ನ ಸುಮಾರು 3.30ರ ಸಮಯದಲ್ಲಿ ದಳಪತಿ ಸಿಂಗ್ ಹಾಗೂ ಅವನ ಸಹಚರ ನನ್ನ ತಲೆ ಮೇಲೆ ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮೊಬೈಲ್ ನಲ್ಲಿ ನಿನ್ನ ಫೋಟೋ ಇದ್ದು, ನಾನು ಏನು ಬೇಕಾದರೂ ಮಾಡುತ್ತೇನೆ. ನಾನು ನಿನ್ನನ್ನು ಕಿಡ್ನಾಪ್ ಮಾಡುವ ಉದ್ದೇಶ ಹೊಂದಿದ್ದೆ. ರಿಕ್ಷಾದಲ್ಲಿ ನಿಮ್ಮ ಸಂಬಂಧಿಕರು, ಆಟೋ ಚಾಲಕ ಇರುವ ಕಾರಣ ಹಾಗೆಯೇ ಹೋಗುತ್ತಿದ್ದೇನೆ ಎಂದು ಹೆದರಿಸಿದ್ದಾನೆ. ಹಲ್ಲೆ ನಡೆಸಿದ ಕಾರಣ ತಲೆಯಲ್ಲಿ ನೋವು ಕಂಡು ಬಂದಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅವರು ದೂರು ನೀಡಲು ದೇವರಾಜ ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು  ನೀನು ಅಪ್ರಾಪ್ತೆ, ನಿನ್ನ ಅಕ್ಕನನ್ನು ಕಳುಹಿಸು ಎಂದಿದ್ದು, ಅಕಸ್ಮಾತ್ ಮೈಸೂರಿನಲ್ಲಿ ಬಾಲಕಿಯರಿಗೇನಾದರೂ ಆದಲ್ಲಿ, ಬಾಲಕಿಯರು ದೂರು ನೀಡಿದಲ್ಲಿ ಮೈಸೂರು ಪೊಲೀಸರು ಸ್ವೀಕರಿಸುವುದಿಲ್ಲವೇ? ಹಾಗಾದರೆ ಬಾಲಕಿಯರಿಗೆ ರಕ್ಷಣೆ ನೀಡುವುದು ಯಾರು? ಯಾರ ಮೊರೆ ಹೋಗಬೇಕು ಎಂಬ ಪ್ರಶ್ನೆಯೀಗ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: