ಕರ್ನಾಟಕ

ಶಿರಾಡಿ ಘಾಟ್ ಮಾರ್ಗದಲ್ಲಿ ಭೂ ಕುಸಿತ: ಉರುಳಿ ಬಿದ್ದ ಬೃಹದಾಕಾರದ ಬಂಡೆ

ಹಾಸನ,ಸೆ.6- ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಮಲೆನಾಡಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಿರಾಡಿ ಘಾಟ್​ ರಸ್ತೆಯ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ.

ಮಾರನಹಳ್ಳಿ ಸಮೀಪ ಬೃಹದಾಕಾರದ ಬಂಡೆಯೊಂದು ರಸ್ತೆ ಪಕ್ಕಕ್ಕೆ ಉರುಳಿದೆ. 20 ಅಡಿ ಎತ್ತರದಿಂದ ಬಂಡೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಮಳೆ ಹೆಚ್ಚಾಗಿ ಮತ್ತೆ ಭೂ ಕುಸಿತ ಉಂಟಾದರೆ ಈ ಬಂಡೆ ರಸ್ತೆಗೆ ಉರುಳುವ ಸಾಧ್ಯತೆ ಇದೆ. ಒಂದು ವೇಳೆ ಬಂಡೆ ರಸ್ತೆಗೆ ಉರುಳಿ ಬಿದ್ದರೆ ಆ ಮಾರ್ಗದ ಸಂಚಾರ ಬಂದ್​ ಆಗಲಿದೆ.

ಶಿರಾಡಿ ಘಾಟ್​​ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಿರಾಡಿ ಘಾಟ್​ ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಮಳೆ ಹೀಗೆಯೇ ಸುರಿಯುತ್ತಿದ್ದು ಭೂ ಕುಸಿತ ಉಂಟಾದರೆ ಶಿರಾಡಿ ಘಾಟ್​ ಬಂದ್​ ಮಾಡುವ ಸಾಧ್ಯತೆ ಇದೆ.

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಿವಿಧೆಡೆ ಮನೆಗಳು ಕುಸಿದು ಬೀಳುವ ಆತಂಕ ಹೆಚ್ಚಾಗಿದೆ. (ಎಂ.ಎನ್)

Leave a Reply

comments

Related Articles

error: