ಕರ್ನಾಟಕಪ್ರಮುಖ ಸುದ್ದಿ

ಐಎಎಸ್ ಸೇವೆಗೆ ರಾಜೀನಾಮೆ ನೀಡಿದ ದಕ್ಷಿಣ ಕನ್ನಡ ಡಿಸಿ ಸಸಿಕಾಂತ್ ಸೆಂಥಿಲ್

ಮಂಗಳೂರು,ಸೆ.6- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಐಎಎಸ್ ಸೇವೆಗೆ ಇಂದು ರಾಜೀನಾಮೆ ನೀಡಿದ್ದಾರೆ.

2017ರ ಅಕ್ಟೋಬರ್ ನಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನಮ್ಮ ವೈವಿಧ್ಯ ಪ್ರಜಾಪ್ರಭುತ್ವದ ಮೂಲಭೂತ ರಚನೆಗಳ ಜೊತೆ ಹಿಂದೆಂದೂ ಕಂಡಿರದ ರೀತಿಯಲ್ಲಿ ರಾಜಿ ಮಾಡಿಕೊಳ್ಳುವಾಗ ನಾಗರಿಕ ಸೇವೆಯಲ್ಲಿ ಮುಂದುವರಿಯುವುದು ನನಗೆ ಅನೈತಿಕವೆಂದು ಎನಿಸಿದ ಕಾರಣ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೂಲ ಚೌಕಟ್ಟುಗಳು ಅತ್ಯಂತ ಕಷ್ಟಕರ ಸವಾಲುಗಳನ್ನು ಎದುರಿಸಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಆದ್ದರಿಂದ ನಾನು ಐಎಎಸ್ ನಿಂದ ಹೊರಬಂದು ನನ್ನ ಕೆಲಸ ಮುಂದುವರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿರುವ ಸಸಿಕಾಂತ್ ಸೆಂಥಿಲ್, ತನ್ನ ರಾಜೀನಾಮೆಗೆ ಯಾವುದೇ ವ್ಯಕ್ತಿ ಅಥವಾ ಸದ್ಯ ತಾನು ಸೇವೆ ಸಲ್ಲಿಸುತ್ತಿರುವ ದ.ಕ. ಜಿಲ್ಲಾಧಿಕಾರಿ ಅವಧಿಯಲ್ಲಿನ ಯಾವುದೇ ಘಟನೆ ಕಾರಣವಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಮೂಲದವರಾದ ಸಸಿಕಾಂತ್ ಸೆಂಥಿಲ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರ್ ಪದವೀಧರರು. 2009ರಲ್ಲಿ ಐಎಎಸ್ ಅಧಿಕಾರಿಯಾದರು. ಈ ಹಿಂದೆ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ದ.ಕ ಜಿಲ್ಲಾಧಿಕಾರಿ ಹುದ್ದೆಗೆ ಬರುವ ಮೊದಲು ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಸಸಿಕಾಂತ್ ಸೆಂಥಿಲ್ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ, ಉತ್ತಮ ಸೇವೆ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಕಳೆದ ವರ್ಷದ ಭೀಕರ ಮಳೆ, ಈ ವರ್ಷದ ಪ್ರವಾಹ, ಅತಿವೃಷ್ಠಿ, ಡೆಂಗ್ಯು, ಮರಳು ಮತ್ತಿತರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಇತ್ತೀಚೆಗಷ್ಟೇ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಕೂಡ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಎಂ.ಎನ್)

Leave a Reply

comments

Related Articles

error: