ಮೈಸೂರು

ದೇಶಿರಂಗ ನಾಟಕೋತ್ಸವ : ಫೆ.26 ರಿಂದ

ಮೈಸೂರಿನ ದೇಶಿರಂಗ ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ಫೆ.8 ರಿಂದ ಮಾರ್ಚ್ 1 ರವರೆಗೆ ರಂಗ ಮತ್ತು ನೃತ್ಯ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಫೆ.26 ರಿಂದ ಮಾರ್ಚ್ 1 ರವರೆಗೆ ‘ದೇಶಿರಂಗ -2017 ನಾಟಕೋತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ನಿರ್ದೇಶಕ ಕೃಷ್ಣ ಜನಮನ ಹೇಳಿದರು.

ಮಂಗಳವಾರ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ಅವರು, ಫೆ.26 ರಂದು ಬೆಳಿಗ್ಗೆ 11 ಗಂಟೆಗೆ ಅರಮನೆ ಮುಂಭಾಗದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಾಟಕೋತ್ಸವ ಉದ್ಘಾಟನೆ ಜರುಗಲಿದೆ. ಮತ್ತು ‘ಜನಾಂದೋಲನದ ಹಿನ್ನೆಲೆಯಲ್ಲಿ ನಾಟಕಗಳು’ ಎಂಬ ವಿಷಯವನ್ನು ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ.ವಿ.ಲಕ್ಷ್ಮೀನಾರಾಯಣ ಅವರು ಅಧ‍್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಜಿ.ಪಿ.ಬಸವರಾಜು ಮತ್ತು ಕೆ.ಪಿ.ವಾಸುದೇವನ್ ವಿಚಾರ ಸಂಕಿರಣ ಕುರಿತಾಗಿ ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ‍್ಯಕ್ಷ  ಡಾ.ವೈ.ಡಿ.ರಾಜಣ್ಣ, ರಂಗ ಚಿಂತಕ ಮುದ್ದುಕೃಷ್ಣ ಇನ್ನಿತರರು ಭಾಗವಹಿಸಲಿದ್ದಾರೆ.

ಫೆ.27 ರಂದು ಸಂಜೆ 6 ಗಂಟೆಗೆ ರಂಗಾಯಣದ ವನರಂಗದಲ್ಲಿ ಕೃಷ್ಣ ಜನಮನ ಅವರ ‘ಅಮಾಸ ಮತ್ತು ಇತರ ರೂಪಾಂತರಗಳು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ‘ನಿರಾಕರಣೆ’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನವಿರುತ್ತದೆ.

ಫೆ.28 ರಂದು ಸಂಜೆ 6 ಗಂಟೆಗೆ ರಂಗಾಯಣದ ವನರಂಗದಲ್ಲಿ ಕೃಷ್ಣ ಜನಮನ ರಚನೆಯ ‘ಕನ್ನಡ ರಂಗಭೂಮಿಯಲ್ಲಿ ದಲಿತ ಸಂವೇದನೆಯ ಕತೆಗಳು’ ಎಂಬ ಪುಸ್ತಕ ಬಿಡುಗಡೆ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘ಕೊನೆಯ ಐದು ದಿನಗಳು’ ಎಂಬ ನಾಟಕ ಪ್ರದರ್ಶನವಿರುತ್ತದೆ. ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರಾದ ಡಾ.ಎಸ್.ತುಕಾರಾಂ ಪುಸ್ತಕ ಬಿಡುಗಡೆ ಮಾಡಿ ನಾಟಕಕ್ಕೆ ಚಾಲನೆ ನೀಡಲಿದ್ದಾರೆ.

ಮಾರ್ಚ್ 1 ರಂದು  ಸಂಜೆ 6 ಗಂಟೆಗೆ ರಂಗಾಯಣದ ವನರಂಗದಲ್ಲಿ ನಾಟಕೋತ್ಸವ ಸಮಾರೋಪ ಸಮಾರಂಭ ಮತ್ತು ನೃತ್ಯೋತ್ಸವವಿರುತ್ತದೆ. ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಚಿಂತಕ ಹಿ.ಶಿ.ರಾಮಚಂದ್ರೇಗೌಡ ಅಧ‍್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಎಸ್.ಚನ್ನಪ್ಪ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಿದ್ದಾರೆ.

ನಂತರ ಸುಮಾರು 60 ಶಿಬಿರಾರ್ಥಿಗಳು ಕರ್ನಾಟಕದ ಮೂಲ ಜನಪದ ನೃತ್ಯಗಳಾದ ಕಂಸಾಳೆ, ಡೊಳ್ಳುಕುಣಿತ, ಕೋಲಾಟ, ಮಾರಿಕುಣಿತ, ಪೂಜಾಕುಣಿತ ಮತ್ತು ಪಟಕುಣಿತಗಳ ಪ್ರದರ್ಶನ ನಡೆಸಿಕೊಡಲಿದ್ದಾರೆ. ನಾಟಕಗಳ ಪಾಸ್ ಗಳು ರಂಗಾಯಣದ ಕ್ಯಾಂಟೀನ್ ನಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ‍್ಠಿಯಲ್ಲಿ ಶಿಬಿರದ ನಿರ್ದೇಶಕಿ ದಿನಮಣಿ ಬಿ.ಎಸ್.ಹಾಜರಿದ್ದರು.

Leave a Reply

comments

Related Articles

error: