ಮೈಸೂರು

ಸಂಚಾರ ನಿಯಮ ಉಲ್ಲಂಘನೆಗೆ ಅವೈಜ್ಞಾನಿಕವಾಗಿ ಏರಿಸಿರುವ ದಂಡದ ಶುಲ್ಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.8:- ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸರಕಾರ ದಂಡದ ಮೊತ್ತವನ್ನು ಏಕಾಏಕಿ ಐದರಿಂದ ಹತ್ತು ಪಟ್ಟು ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಹಾಗೂ ಈ ಕೂಡಲೇ ಅವೈಜ್ಞಾನಿಕವಾಗಿ ಏರಿಸಿರುವ ದಂಡದ ಶುಲ್ಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಆರ್ ಟಿಒ ಕಛೆರಿ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ  ಇಡೀ ದೇಶದ ಜನತೆ ಕೇಂದ್ರಸರ್ಕಾರದ ನೋಟ್ ಬ್ಯಾನ್, ಜಿ ಎಸ್ ಟಿ ಹಾಗೂ ರೇರಾ ಕಾಯ್ದೆಗಳಿಂದ ತತ್ತರಿಸಿ ಹೋಗಿದ್ದಾರೆ. ಜೊತೆಗೆ ಬಹಳಷ್ಟು ಮಂದಿ ನೆರೆ ಹಾನಿಯಿಂದ ತಮ್ಮ ಸರ್ವಸ್ವವನ್ನು, ತಮ್ಮ ಜೀವಮಾನದ ಸಂಪಾದನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಡೀ ದೇಶ ಆರ್ಥಿಕ ಹಿಂಜರಿತದ ಹೊಡೆತ ಅನುಭವಿಸುತ್ತಿದ್ದರೆ, ಈ ಸರ್ಕಾರ ಹೊಸ ಟ್ರಾಫಿಕ್ ರೂಲ್ಸ್ ಗಳನ್ನು ಜಾರಿಗೆ ತಂದು ಸಾರ್ವಜನಿಕರಿಂದ ಹಗಲು ದರೋಡೆ ಮಾಡಲು ಹೊರಟಿರುವುದು ವಿಷಾದನೀಯ ಸಂಗತಿ.

ಜನರ ಕೊಳ್ಳುವ ಶಕ್ತಿ ದೇಶದ ಆರ್ಥಿಕ ಹಿಂಜರಿತದಿಂದಾಗಿ ಶೇಕಡಾ. 30 ಕಡಿಮೆಯಾಗಿದೆ. ಈಗ ಜನರು 5 ರೂಪಾಯಿಯ ಬಿಸ್ಕೆಟ್ ಪ್ಯಾಕೆಟ್ ಖರೀದಿಸಲು ಎರಡು ಬಾರಿ ಯೋಚಿಸುವ ಪರಿಸ್ಥಿತಿ ಇದೆ.ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಯಾವುದೋ ಸಿನಿಮಾದಲ್ಲಿ ಕಾಲ್ಪನಿಕವಾಗಿ ತೋರಿಸಿರುವುದನ್ನು ಬಂಡವಾಳ ಮಾಡಿಕೊಂಡು ಸಾಮಾನ್ಯ ಜನರ ಮೇಲೆ ದಂಡವನ್ನು 10 ಪಟ್ಟು ಹೆಚ್ಚಿಸಲು ಹೊರಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂಚಾರಿ ನಿಯಮಗಳ ಅರಿವು ಮೂಡಿಸುವ ಬದಲು, ಸರ್ಕಾರ  ಮಾತೆತ್ತಿದರೆ ಹೆಲ್ಮೆಟ್ ಹೆಸರು ಹೇಳಿಕೊಂಡು ಸವಾರರನ್ನು ಕಳ್ಳರಂತೆ ನೋಡಿ, ಬಡಜನರ ಲೂಟಿಮಾಡಿ, ಸರ್ಕಾರದ ಬೊಕ್ಕಸಕ್ಕೆ ಹಣವನ್ನು ತುಂಬಿಸಿಕೊಳ್ಳುತ್ತಿದೆ. ಸರಕಾರ ದಂಡ ಹಾಕುವ ಮೊದಲು ಸರಿಯಾದ ರಸ್ತೆಗಳನ್ನು ನಿರ್ಮಿಸಿ, ಹಳ್ಳಕೊಳ್ಳಗಳನ್ನು ಮುಚ್ಚಿ ನಂತರ ದಂಡ ವಿಧಿಸಿ ಹಾಗೂ ಮದ್ಯಪಾನ ಸೇವಿಸಿ ವಾಹನ ಚಲಾಯಿಸುವವರಿಗೆ ದಂಡ ಹಾಕುವ ಬದಲು ಗುಂಡಿಗೆಯಿದ್ದರೆ ಮದ್ಯಪಾನವನ್ನೇ ನಿಷೇಧಿಸಿ. ಈಗಾಗಲೇ ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ತಳ್ಳಿಹಾಕಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಈ ನೀತಿಯನ್ನು ಕೂಡಲೇ ತಳ್ಳಿ ಹಾಕಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ಪಿ ಶಾಂತರಾಜೇಅರಸ್, ಶಾಂತಮೂರ್ತಿ, ಕುಮಾರ್ ಗೌಡ, ಅಕ್ಷಯ್, ವಿಜಯೇಂದ್ರ, ಪರಿಸರ ಚಂದ್ರು, ಸುಂದರ್, ಪ್ರದೀಪ, ಮೊಗಣ್ಣಚಾರ್ ಕಲೀಂ, ದರ್ಶನ್ ಗೌಡ, ವಿನೋದ್, ಗುರುಮಲ್ಲಪ್ಪ, ವಂದನ ಎಸ್, ಮನುನಾಯಕ್, ರಮೇಶ್ ಶ್ರೀನಿವಾಸ ರಾಜಕುಮಾರ್, ಬಂಗಾರಪ್ಪ, ದೂರ ಸುರೇಶ್, ನಂದಕುಮಾರ್, ರಾಜೇಶ್, ರಾಕೇಶ್,ದೀಪಕ್, ಸ್ವಾಮಿ, ಶ್ರೀ ವತ್ಸ, ಗುರುಶಂಕರ್  ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್ಎಚ್)

Leave a Reply

comments

Related Articles

error: