ಮೈಸೂರು

ಬೊಂಬೆ ಮನೆ 2019 – ವಾರ್ಷಿಕ ಬೊಂಬೆ ಪ್ರದರ್ಶನದ 15ನೇ ಅವತರಣಿಕೆ : ಸೆ.11ರಿಂದ ಪ್ರದರ್ಶನ ಆರಂಭ

ಮೈಸೂರು,ಸೆ.9:- ಹಬ್ಬವೆನ್ನುವುದು  ಇತಿಹಾಸದ ಸಂಭ್ರಮಾವಲೋಕನ. ಹಿಂದಿನ ನೆನಪನ್ನು ಇಂದಿನ ಆಚರಣೆಯಾಗಿಸಿ ಹಸಿರಾಗಿಸುವ ನಮ್ಮ ದೇಶದ ವಾಡಿಕೆ. ದಸರಾ ಬೊಂಬೆ ಹಬ್ಬವೂ ಇಂಥದ್ದೇ. ಸರಿಸುಮಾರು ನಾಲ್ಕುನೂರು ವರ್ಷಗಳಷ್ಟು ಹಿಂದಿನಿಂದ, ವಿಜಯನಗರದ ಕರ್ನಾಟಕ ಸಿರಿಸಂಸ್ಥಾನದಿಂದ ಅನೂಚಾನಾಗಿ  ನಡೆದು ಬಂದಿರುವ ಸಾಂಸ್ಥಾನಿಕ ಆಚರಣೆ.

ವಿಕ್ರಮಾದಿತ್ಯನ ರತ್ನಸಿಂಹಾಸನದ ಮೂವತ್ತೆರಡು ಬೊಂಬೆಮಲ್ಲಿಯರ ಕಥೆ ಸರ್ವಪರಿಚಿತ. ಆ ಎಲ್ಲಾ ಬೊಂಬೆಗಳು ಒಂದಾದ ಮೇಲೊಂದು ಜೀವಂತಗೊಂಡು ಭೋಜರಾಜನಿಗೆ ಕಥೆಗಳ ಮುಖಾಂತರ ರಾಜಧರ್ಮವನ್ನು ಪರಿಚಯಿಸಿದ್ದು, ತನ್ಮೂಲಕ ಆತನು ತನ್ನ ಭೂಸಂಸಾರವನ್ನು ಶೃತಿಪಡಿಸಿದ್ದು ಜಾನಪದ ಗಾಥೆ. ಅದ್ಯಾವ ಜಾಣನ ಚಾಣಾಕ್ಷ ಅಂಬೋಣವೋ ಏನೋ, ಬೊಂಬೆಗಳ ಮನುಷ್ಯ ಸಮಾನ ಅಭಿವ್ಯಕ್ತಿ ಮಾರ್ಮಿಕ ಸಡಗರವಾಗಿ ಇಂದಿಗೂ ಮಾನ್ಯ. ತನ್ನ ಬಿರುಗಣ್ಣ ಸೌಜನ್ಯದಿಂದ ಮನಸೂರೆಗೊಳ್ಳುವ ಬಣ್ಣದ ಬೊಂಬೆ ಎಂಥವರಿಗೂ ಅವರ ಜೀವನದ ಅತ್ಯಾನಂದ ಘಳಿಗೆ ಮರುಕಳಿಸಬಲ್ಲ ಮಾಂತ್ರಿಕಮಣಿ. ಆಟಿಕೆಯೊಂದು ರಸಸೂಸಿ, ಎದೆವೀವ ಬೊಂಬೆಯಾಟ, ನೀತಿಪೊರೆವ ಬೊಂಬೆಹಬ್ಬವಾಗಿರುವುದು ಬಿಂಬಪೂಜೆಯ ಉತ್ಕೃಷ್ಟ ಭಾಗ. ಬೊಂಬೆಗಳಿಗಿರುವ ಈ ಆಕರ್ಷಕ ಶಕ್ತಿಯ ಅವಕಾಶದ ಹೊಸ ಆಯಾಮದ ಹಿನ್ನೆಲೆಯಲ್ಲಿ ಹತ್ತಾರು ಕಥೆಗಳನ್ನೂ, ವಿಚಾರಗಳನ್ನು ಮರು ಪರಿಚಯಿಸುವತ್ತ `ಬೊಂಬೆ ಮನೆ’ ಮತ್ತೊಮ್ಮೆ ಸನ್ನದ್ಧವಾಗಿದೆ.

ಬಾರ್ಬೀ ಗೊಂಬೆಯ ಸೃಷ್ಟಿಯಾಗಿ ಇಂದಿಗೆ 60 ವರ್ಷ. ಈ ಆಧುನಿಕ ಬೊಂಬೆ ಸುಂದರಿಯ ಷಷ್ಟ್ಯಬ್ದಿಪೂರ್ತಿಗೆ ಬೊಂಬೆ ಮನೆಯಲ್ಲಿ ವಿಶೇಷ ಅಂಕಣ ತಯಾರಾಗಿದೆ. ಈಕೆಯ ವೈವಿಧ್ಯಮಯ ಅವತಾರಗಳ ಜೊತೆಗೆ ಜರ್ಮನಿ, ಉಸ್ಬೇಕಿಸ್ತಾನ್, ಫ್ರಾನ್ಸ್, ಥಾಯ್‍ಲ್ಯಾಂಡ್, ವಿಯೆಟ್‍ನಾಮ್, ಬ್ರಿಟನ್ ಮತ್ತಿತರ ಸುಮಾರು ಹತ್ತು ದೇಶಗಳ ಸಾಂಪ್ರದಾಯಿಕ ಬೊಂಬೆಗಳ ದೃಶ್ಯಾವಳಿ ಮನಮೋಹಕವಾಗಿರಲಿದೆ.

ವರ್ಣಾಂಕಿತ. ನಾಮ, ತಿಲಕಗಳ ಒಂದು ಪುಟ್ಟ ಅವಲೋಕನ ಬೊಂಬೆಗಳ ಮುಖಾಂತರ ಅಪರಿಚಿತರಿಗೆ ಹಿಂದೂ ಧರ್ಮದ ಮೇಲ್ದೋರಿಕೆಯಂತೆ ಕಂಡುಬರುವ ನಾಮ-ತಿಲಕಗಳು, ನಮ್ಮ ಧರ್ಮದ ವಿವಿಧ ಪ್ರಭೇದಗಳ, ಮನೆ-ಮಠಗಳ ಸಂಪ್ರದಾಯದ ಶಿರಾರ್ಥ, ವಸ್ತ್ರ, ಅಲಂಕರಣ, ಭಾಷೆಗಳ ಮೇರುಶೋಭೆಯಾಗಿ, ನಮ್ಮ ಪಂಗಡಗಳನ್ನು ನಿರ್ದಿಷ್ಟವಾಗಿ ಗುರುತಿಸುವಷ್ಟರ ಮಟ್ಟಿಗೆ ಪ್ರಚಲಿತವಿರುವ ಸಂಜ್ಞಾ ವೈಶಿಷ್ಟ್ಯಗಳು. ಸನಾತನ ಜ್ಞಾನದ, ಸಮಾಜಮುಖಿ ಸಂಘ ಸೂಚಿಗಳು. ಕುಂಕುಮ, ಅರಿಶಿನ, ಕಾಡಿಗೆ, ವಿಭೂತಿ-ಭಸ್ಮಗಳಲ್ಲದೆ ಅಗರು, ಗೋಪೀಚಂದನ, ತುಲಸೀಚೂರ್ಣ, ಕೇಸರಿ, ಸಿಂಧೂರ, ಅಂಗಾರಕ, ಭಂಡಾರ, ಬುಕ್ಕ, ಸಾದ್, ಗಂಧಾಕ್ಷತ, ಗೋರೋಚನ, ಗುಲಾಲ್, ಇತ್ಯಾದಿ ದ್ರವ್ಯವಿಶೇಷಗಳ ಬಳಕೆ ನಾಮ-ತಿಲಕ ಹಚ್ಚುವಲ್ಲಿ ಉಂಟು. ಹಣೆಯ ಜೊತೆ ಕೆನ್ನೆ, ಕಪೋಲ, ನಾಸಿಕಗಳು ಕೆಲವೊಮ್ಮೆ ದೇಹದ ಬೇರೆ ಬೇರೆ ಭಾಗಗಳಲ್ಲಿ ತಿಲಕ ಅಲಂಕಾರ ಮಾಡಿಕೊಳ್ಳುವುದು ಸಹಜ. ನೂರಾರು ಜನಾಂಗಗಳು, ಅವರ ನಂಬಿಕೆಗಳು ಹೇಗೆ ವೈವಿಧ್ಯವೋ ಅಂತೆಯೇ ಅವರ ತಿಲಕಗಳು ಕೂಡ ವಿಶಿಷ್ಟ. ವಿವಿಧ ವರ್ಣಗಳಿಂದ ಲಲಾಟವನ್ನು ಅಂಕಿತಗೊಳಿಸಿಕೊಳ್ಳುವ ನಮ್ಮ ಪ್ರೀತಿಯ ಸಂಪ್ರದಾಯ – ವರ್ಣಾಂಕಿತ.

ಈ ವರ್ಷ ಹಲವಾರು ಮಹನೀಯರ ವಿಶೇಷ ಜನ್ಮವಾರ್ಷಿಕೋತ್ಸವಗಳ ಸಂಧಿ. ಮಹಾತ್ಮ ಗಾಂಧಿ (150), ಮೈಸೂರಿನ 24ನೆಯ ಮಹಾರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ (135), ಪಂಡಿತ್ ಜವಾಹರಲಾಲ ನೆಹರೂ (130) ಹಾಗೂ ಮೈಸೂರಿನ 25ನೆಯ ಮಹಾರಾಜಶ್ರೀ ಜಯ ಚಾಮರಾಜ ಒಡೆಯರ್ (100) – ಈ ವಿಶಿಷ್ಟ ಪರ್ವಕ್ಕೆ ಸಾಕ್ಷಿಯಾಗಿ ಬೊಂಬೆ ಮನೆಯಲ್ಲಿ ಮೂರನೆಯ ವಿಶೇಷ ಅಂಕಣ – ಇಲ್ಲಿ ಬೊಂಬೆಗಳು, ಚಿತ್ರಪಟಗಳು, ಛಾಯಾಚಿತ್ರಗಳು ಹಾಗೂ ವಸ್ತು ವಿಶೇಷಗಳ ಪ್ರದರ್ಶನವಿದೆ.

ಲೀಲಾ ಶುಕ

ಮಾತಂಗಿ, ರಾಜರಾಜೇಶ್ವರಿ, ಲಲಿತಾ, ಮೀನಾಕ್ಷಿ, ಕಾಮಾಕ್ಷಿ, ಆಂಡಾಳ್ – ಈ ದೇವತೆಯರ ಕೈಯಲ್ಲಿ ಕುಳಿತು ಅವರೊಡನೆ ಸಲ್ಲಾಪ  ನಡೆಸುವಂತೆ ಕಾಣುವ ಗಿಳಿಯೇ ಲೀಲಾ ಶುಕ. ಹಲವಾರು ಬಣ್ಣಗಳಿಂದ ಕಣ್ಣು ಕೋರೈಸುವಂತೆ ರಂಜಿತಗೊಂಡ ವಿವಿಧ ಆಕಾರ, ಅಳತೆಗಳ ನೂರಾರು ಗಿಳಿಗಳು ನಮ್ಮ ನಾಲ್ಕನೆಯ ವಿಶೇಷ ಅಂಕಣದಲ್ಲಿ ಒಮ್ಮಲೇ ಬಂದಿಳಿದಿವೆ. ಶೃಂಗಾರ, ಕಾಮ, ಅನುರಾಗಗಳ ಅಧಿದೇವತೆಗಳಾದ ದೇವದಂಪತಿ ರತಿ-ಮನ್ಮಥರ ಕೈಂಕರ್ಯಕ್ಕೆಂದು ಬಂದಿರುವ ಹಾಗಿದೆ.

ಇದರೊಟ್ಟಿಗೆ ಹಲವಾರು ನವೀನ ಮಾದರಿಯ ಗೊಂಬೆಗಳು ಬೊಂಬೆ ಮನೆಯ 15ನೇ ಅವತರಣಿಕೆಯಲ್ಲಿ ಸಿದ್ಧವಾಗಿವೆ. ಮೈಸೂರಿನ ರಾಜದಂಪತಿ ಅಪ್ಪಾಜಿ-ಅಮ್ಮಣ್ಣಿಯರು, ಗಜೇಂದ್ರಮೋಕ್ಷ, ಸಪ್ತನದಿಗಳು, ನವನಟರಾಜ, ಅತ್ತಿ ವರದರಾಜ ಸ್ವಾಮಿ, ರಾಮ-ಗುಹ ಆಲಿಂಗನ, ಗೊಂಬೆ ವಧು-ವರರ ಜೋಡಿ – ಹೀಗೆ ಅನುಪಮ ಗೊಂಬೆಗಳ ಮೇಳ ಸೇರಿದೆ. ತಮ್ಮೂರ ಗಾಥೆ, ತಂತಮ್ಮ ಕಥೆಯ ನಲಿದುಲಿವ ಗೊಂಬೆ ಜಾತ್ರೆ  ನಡೆಯಲಿದೆ.

ಸೆಪ್ಟಂಬರ್ 10 ರ  ಮಂಗಳವಾರ ಸಂಜೆ 5  ಗಂಟೆಗೆ ಪ್ರತಿಮಾ ಗ್ಯಾಲರಿ, 91, ಮೊದಲ ಮಹಡಿ ಆಮ್ರಪಾಲಿ ಸೀರೆ ಮಳಿಗೆಯ ಮೇಲೆ, ನಜರ್‍ಬಾದ್ ಮುಖ್ಯ ರಸ್ತೆ ಮೈಸೂರು ಇಲ್ಲಿ ಉದ್ಘಾಟನೆಗೊಳ್ಳಲಿದೆ. 11-09-2019 ರಿಂದ 10-11-2019 ಪ್ರದಸರ್ಣಗೊಳ್ಳಲಿದ್ದು, ಮುಕ್ತ  ಪ್ರವೇಶವಿದೆ. (ಎಸ್.ಎಚ್)

Leave a Reply

comments

Related Articles

error: