ಮೈಸೂರು

ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಮೂರು ಚಿರತೆ : ವಿಷ ಪ್ರಾಶನ ಶಂಕೆ

ಮೈಸೂರು,ಸೆ.10:- ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನೊಂದರಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ.

ಹಲ್ಲರೆ ಗ್ರಾಮದ ಚೆನ್ನನಂಜಪ್ಪ ಮತ್ತು ಮಹಮದ್‌ ಪಾಷ ಎಂಬುವವರ ಜಮೀನಿನಲ್ಲಿ ಅಂದಾಜು 10 ವರ್ಷದ ಹೆಣ್ಣು ಚಿರತೆ, 8 ತಿಂಗಳ 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ.   ಚಿರತೆಗಳು ಮೃತಪಟ್ಟಿರುವ ಬಗ್ಗೆ ಪ್ರಾಣಿಪ್ರಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಾಯಿಗಳ ಹಾವಳಿ ತಪ್ಪಿಸಲು ಜಮೀನಿನಲ್ಲಿ ವಿಷಾಹಾರ ಇಟ್ಟಿದ್ದರು ಎನ್ನಲಾಗಿದೆ. ಆ ವಿಷಾಹಾರ ಸೇವಿಸಿ ಸತ್ತ ನಾಯಿಯನ್ನು ಈ ಚಿರತೆಗಳು ತಿಂದು ಸಾವನ್ನಪ್ಪಿವೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಚಿರತೆ ಸಾವನ್ನಪ್ಪಿರುವ ಜಮೀನಿನ ಮಾಲೀಕ ಚೆನ್ನಬಸಪ್ಪ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇದು ಘಟನೆ ಕುರಿತು ಹೆಚ್ಚಿನ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳ ಮೃತದೇಹವನ್ನು ವಶಕ್ಕೆ ಪಡೆದು ಪಶು ವೈದ್ಯಾಧಿಕಾರಿ ಡಾ.ನಾಗರಾಜ್‌ ಹಾಗೂ ಹುರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಕುಮಾರ್‌ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.

ವಲಯ ಅರಣ್ಯಾಧಿಕಾರಿ ಲೋಕೇಶ್‌ ಮೂರ್ತಿ ಮಾತನಾಡಿ, ”ಮೋಲ್ನೋಟಕ್ಕೆ ಚಿರತೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಕಂಡು ಬಂದಿದೆ. ಮೃತ ಚಿರತೆಗಳ ಮರಣೋತ್ತರ ಪರೀಕ್ಷೆ ವೇಳೆ ಕೆಲ ಅಂಗಾಂಗಗಳನ್ನು ಸಂಗ್ರಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಚಿರತೆಗಳು ಮೃತಪಟ್ಟಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ,” ಎಂದು ತಿಳಿಸಿದರು.

ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿಯೇ ಮೂರು ಚಿರತೆಗಳ ಮೃತದೇಹ ಪತ್ತೆಯಾಗಿರುವುದು ತಿಳಿಯುತ್ತಿದಂತೆ ಹಲ್ಲರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ವೀಕ್ಷಿಸಿದರು. ಚಿರತೆಗಳು ಸಮೀಪದ ಓಂಕಾರ ಅರಣ್ಯ ವಲಯದಿಂದ ಬಂದಿರಬಹುದು, ವಿಷ ಪ್ರಾಶನದಿಂದ ಚಿರತೆಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿ ಡಿಸಿಎಫ್‌ ಪ್ರಶಾಂತ್‌ಕುಮಾರ್‌, ಎಸಿಎಫ್‌ ಪರಮೇಶ್ವರಪ್ಪ, ಮೈಸೂರಿನ ವನ್ಯಜೀವಿ ಪರಿಪಾಲಕರಾದ ಕೃತಿಕಾ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: