ದೇಶವಿದೇಶ

ವಿಜಯ್ ಮಲ್ಯ ಹಸ್ತಾಂತರ ಸಂಬಂಧ ಭಾರತ-ಬ್ರಿಟಿಷ್ ಅಧಿಕಾರಿಗಳ ಮಾತುಕತೆ

ನವದೆಹಲಿ: ದೇಶಭ್ರಷ್ಟನಾಗಿ ಬ್ರಿಟನ್‍ನಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು “ಭಾರತ-ಬ್ರಿಟನ್ ಮ್ಯೂಚುವಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿ – ಎಂಎಲ್‍ಎಟಿ” ಪರಿಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಬ್ರಿಟಿಷ್ ಮತ್ತು ಭಾರತೀಯ ಅಧಿಕಾರಿಗಳು ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಬ್ರಿಟಿಷ್ ವಿದೇಶಾಂಗ ಇಲಾಖೆಯ ಕಾನೂನು ವಿಭಾಗದೊಂದಿಗಿನ ಚರ್ಚೆಯ ಕುರಿತು ಯೂರೋಪಿಯನ್ ಒಕ್ಕೂಟ ನಿಯೋಗದ ಮುಖ್ಯಸ್ಥ ಜೆಫ್ರಿ ಆರ್ಡನ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಕೆಲವು ಸೂಕ್ಷ್ಮ ವಿಷಯಗಳನ್ನು ಹೆಚ್ಚು ಚರ್ಚಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಎರಡೂ ದೇಶಕ್ಕೆ ಅನುಕೂಲವಾಗುವಂತೆ ಒಪ್ಪಂದಗಳನ್ನು ಇನ್ನಷ್ಟು ಬಲಯುತಗೊಳಿಸಲು ಬಯಸುವುದಾಗಿ ತಿಳಿಸಿದರು.

ಭಾರತದ ಕೇಂದ್ರ ತನಿಖಾ ದಳ (ಸಿಬಿಐ) ಫೆ.9ರಂದು ಉದ್ಯಮಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಬ್ರಿಟನ್‍ ರಾಯಭಾರ ಕಚೇರಿಗೆ ಮನವಿ ಸಲ್ಲಿಸುವಂತೆ ಕೇಳಿಕೊಂಡಿತ್ತು. “ಸಿಬಿಐ ಪತ್ರವನ್ನು ನಾವು ಬ್ರಿಟಿಷ್ ಹೈಕಮಿಷನರ್ ಅವರಿಗೆ ನೀಡಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಸುದ್ದಿಗಾರಿಗೆ ತಿಳಿಸಿದರು.

ಪ್ರಸ್ತುತ ಇರುವ ಒಪ್ಪಂದಗಳ ಪ್ರಕಾರವೇ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿದೆ. 9 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡು ಭಾರತ ತೊರೆದು ಬ್ರಿಟನ್‍ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರಿಗೆ ಇದೀಗ ಬಿಸಿ ತಟ್ಟಲಾರಂಭಿಸಿದೆ.

ಹಸ್ತಾಂತರ ಮನವಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರವು ದೊಡ್ಡ ಮೊತ್ತದ ಸಾಲ ಮರುಪಾವತಿ ಮಾಡದೆ ದೇಶದ ಆರ್ಥಿಕತೆಗೆ ಧಕ್ಕೆ ತರುವಂಥವರಿಗೆ ಪಾಠ ಕಲಿಸುವ ಸೂಚನೆ ತೋರಿದೆ. ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

2016 ರ ಏಪ್ರಿಲ್‍ನಿಂದ ಬ್ರಿಟನ್‍ನಲ್ಲಿ ನೆಲೆಸಿರುವ ಮಲ್ಯ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದು, ತಮ್ಮನ್ನು ದೇಶದಿಂದ ಬಲವಂತವಾಗಿ ಹೊರದಬ್ಬಲಾಗಿದೆ ಎಂದು ವಾದಿಸುತ್ತಿದ್ದಾರೆ.

ಆದರೆ ಸಿಬಿಐ ಕಳೆದ ತಿಂಗಳು ಮಲ್ಯ ವಿರುದ್ಧ ಚಾರ್ಜ್’ಶೀಟ್ ದಾಖಲಿಸಿದ್ದು, ಕಿಂಗ್‍ ಫಿಷನ್ ಏರ್‍’ಲೈನ್ಸ್ ಮತ್ತು ಇತರೆ ವಿವಿಧ ಒಂಭತ್ತು ಬ್ಯಾಂಕ್‍ ಅಧಿಕಾರಿಗಳು ಲಾಭಕ್ಕಾಗಿ ಮಲ್ಯ ಜೊತೆ ಶಾಮೀಲಾಗಿರುವ ಶಂಕೆ ಇದೆ. ಇವರುಗಳ ಮೇಲಿನ ಆರೋಪ ಸಾಬೀತಾದಲ್ಲಿ ಏಳು ವರ್ಷಗಳ ಕಾಲ ಶಿಕ್ಷೆಯಾಗುವ ಸಂಭವವಿದೆ.

ಕಳೆದ ವರ್ಷ ಏಪ್ರಿಲ್‍ನಲ್ಲಿ ಭಾರತ ಸರ್ಕಾರವು ಮಲ್ಯ ಪಾಸ್‍ಪೋರ್ಟ್‍ ಅನ್ನು ರದ್ದುಗೊಳಿಸಿದೆ. ಆದರೆ ಮಲ್ಯ ಬ್ರಿಟನ್ ಪ್ರವೇಶ ಮಾಡುವಾಗ ಪಾಸ್‍ಪೋರ್ಟ್‍ ರದ್ದಾಗಿರಲಿಲ್ಲವಾದ ಕಾರಣ ಅವರನ್ನು ಬಂಧಿಸುವ ವಾರಂಟ್ ಹೊರಡಿಸುವ ಕುರಿತು ಬ್ರಿಟನ್‍ ತಕರಾರು ಹೊಂದಿದ್ದರಿಂದಾಗಿ ಹಸ್ತಾಂತರಕ್ಕೆ ಮನವಿ ಸಲ್ಲಿಸಿದೆ.

Leave a Reply

comments

Related Articles

error: