ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ : ಸಚಿವ ಸಿ.ಟಿ.ರವಿ

ಮೈಸೂರು,ಸೆ.11:-  ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣವಿದೆ, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ ಎಂದು ಬಿಜೆಪಿ ರಾಜ್ಯ ಚುನಾವಣಾಧಿಕಾರಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ನಿನ್ನೆ ಆಯೋಜಿಸಿದ್ದ ಬಿಜೆಪಿ ಸಾಂಸ್ಥಿಕ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾಯಕರ ಆಯ್ಕೆಯಲ್ಲಿ ಅರ್ಹತೆ ಮುಖ್ಯವಲ್ಲ. ಡಿಎನ್‌ಎ (ವಂಶವಾಹಿ) ಮುಖ್ಯವಾಗುತ್ತದೆ. ಆದರೆ, ಜನಸಂಘದಿಂದ ಬಿಜೆಪಿವರೆಗೂ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಕಾಲಕಾಲಕ್ಕೆ ಚುನಾವಣೆ ನಡೆಸಿ ನಾಯಕರನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.

ಡಿಎನ್‌ಎ ಆಧಾರದ ಮೇಲೆ ನಾಯಕತ್ವ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ಸಿದ್ದರಾಮಯ್ಯ ಇರುವ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಆದರೂ, ತಮ್ಮನ್ನು ತಾವು ಸಮಾಜವಾದಿ ಎಂದು ಕರೆದುಕೊಳ್ಳುತ್ತಾರೆ. ಪ್ರಗತಿಪರರು ಎಂದು ಹೇಳಿಕೊಳ್ಳುವವರು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಎಂಎಲ್ಸಿ ಅಶ್ವಥ ನಾರಾಯಣ, ಮುಖಂಡರಾದ ಸುರೇಶ್‌ಬಾಬು, ಎನ್.ವಿ.ಪಣೀಶ್, ಬಿ.ಪಿ.ಮಂಜುನಾಥ್, ಎಂ.ರಾಜೇಂದ್ರ, ಸಂದೇಶ್‌ಸ್ವಾಮಿ, ಪಕ್ಷದ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: