ಮೈಸೂರು

ಶಾಸಕ ಎಲ್. ನಾಗೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬೆಳಕು ಸಂಸ್ಥೆಯ ವತಿಯಿಂದ 50ಕ್ಕೂ ಹೆಚ್ಚು ಹೆಲ್ಮೆಟ್ ವಿತರಿಸುವ ಮೂಲಕ ಸಂಚಾರಿ ನಿಯಮ ಪಾಲನೆಯ ಬಗ್ಗೆ ಜಾಗೃತಿ

ಮೈಸೂರು,ಸೆ.11:- ಇಂದು ಚಾಮರಾಜ ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಬೆಳಕು ಸಂಸ್ಥೆಯ ವತಿಯಿಂದ ಶುಭಕೋರಲು ಹೆಲ್ಮೆಟ್ ಇಲ್ಲದೇ ಕಚೇರಿಗೆ ಬಂದ ಅಭಿಮಾನಿಗಳು, ಹಿತೈಷಿಗಳು ಹಾಗೂ ನಾಗರೀಕರಿಗೆ ಸಂಚಾರಿ ಪೋಲಿಸರೊಂದಿಗೆ ಸೇರಿ ಉಚಿತವಾಗಿ ಐ.ಎಸ್.ಐ. ಮುದ್ರೆ ಇರುವ 50ಕ್ಕೂ ಹೆಚ್ಚು ಹೆಲ್ಮೆಟ್ ವಿತರಿಸುವ ಮೂಲಕ ಸಂಚಾರಿ ನಿಯಮ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ಕೆ ಶಾಸಕರಾದ ಎಲ್. ನಾಗೇಂದ್ರ, ಬೆಳಕು ಸಂಸ್ಥೆಯ ಸಂಸ್ಥಾಪಕ, ಬಿ.ಜೆ.ಪಿ. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ನಿಶಾಂತ್ ಚಾಲನೆ ನೀಡಿದರು.

ನಂತರ ಮಾತನಾಡಿದ ಎಲ್. ನಾಗೇಂದ್ರ ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಬೇಕಾಬಿಟ್ಟಿ ವಾಹನ ಚಲಾಯಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದರಿಂದ ಸಂಚಾರಿ ಪೊಲೀಸರು ಮತ್ತು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಸುಶಿಕ್ಷಿತ ಸಮುದಾಯ ಮತ್ತು ಯುವ ಸಮುದಾಯವೇ ಇಂದು ನಿಯಮಗಳ ಪಾಲನೆ ಮಾಡಲು ಉದಾಸೀನ  ಮಾಡುತ್ತಿದೆ.  ದಂಡ  ಪಟ್ಟಿಗಳನ್ನು ಪರಿಷ್ಕರಿಸಿ ವಿಧಿಸಿದರೆ ಹಲವಾರು ಪ್ರಾಣಗಳು ಉಳಿಯುವ ಸಂಭವ ಹೆಚ್ಚಿದೆ. ಆದ್ದರಿಂದ ಪರಿಷ್ಕೃತ ದರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಬೆಳಕು ಸಂಸ್ಥೆ ನನ್ನ ಹುಟ್ಟುಹಬ್ಬದಂದೇ ಈ ಕಾರ್ಯಕ್ಕೆ ಮುಂದಾಗಿರುವುದನ್ನು  ಶ್ಲಾಘಿಸಿದರಲ್ಲದೆ ತಪಾಸಣೆಯ ವೇಳೆಯಲ್ಲಿ ದಯಮಾಡಿ ಪೊಲೀಸ್ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸದೆ ಸಹಕರಿಸಿ ಎಂದು ತಿಳಿಸಿದರು.

ಕೆ.ಎಂ. ನಿಶಾಂತ್ ಮಾತನಾಡಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಿಸಿರುವ ಕುರಿತು ಸಾರ್ವಜನಿಕರಲ್ಲಿ ವಿರೋಧಪಕ್ಷಗಳು ಮತ್ತು ಅವುಗಳ ಬೆಂಬಲಿತ ಸಂಘಟನೆಗಳು ಇಲ್ಲದ ಆತಂಕವನ್ನು ಸೃಷ್ಟಿಸುತ್ತಿದೆ. ದಂಡದ ಮೊತ್ತ ಹೆಚ್ಚಾಗಿರುವುದು ನಿಯಮವನ್ನು ಉಲ್ಲಂಘಿಸುವವರಿಗೆ ಹೊರೆಯಾಗಿ ಪರಿಣಮಿಸುತ್ತದೆಯೇ ಹೊರತು ನಿಯಮವನ್ನು ಪಾಲಿಸುವವರಿಗಲ್ಲ. ಆದ್ದರಿಂದ ದಯಮಾಡಿ ಎಲ್ಲ ವಾಹನ ಸವಾರರು ಹೆಲ್ಮೆಟ್ ಧರಿಸಿ, ‌ಕುಡಿದು ವಾಹನ ಚಾಲನೆ ಮಾಡಬೇಡಿ, ವಾಹನಗಳಿಗೆ ಕಾಲಕಾಲಕ್ಕೆ ವಿಮೆ ಪಾವತಿಸಿ, ಅಪಾಯಕಾರಿ ಚಾಲನೆ ಮಾಡದಿರಿ, ಪೋಷಕರು ಅಪ್ರಾಪ್ತರಿಗೆ ವಾಹನಗಳನ್ನು ಕೊಡದಿರಿ ಎಂದು ಮನವಿಮಾಡಿದರು.

ಈ ಸಂದರ್ಭ  ಬಿಜೆಪಿ ಮುಖಂಡರಾದ ಸೋಮಶೇಖರ್ ರಾಜು, ಚೌಡಪ್ಪ, ಚಿಕ್ಕವೆಂಕಟ, ಯುವ ಮುಖಂಡರಾದ ವಿಕ್ರಮ್ ಐಯಂಗಾರ್, ನಗರಪಾಲಿಕೆ ಸದಸ್ಯರಾದ ಸುಬ್ಬಯ್ಯ, ಗುರುವಿನಾಯಕ್, ಪ್ರಮಿಶ, ರಂಗಸ್ವಾಮಿ, ಪುನಿತ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: