ಪ್ರಮುಖ ಸುದ್ದಿಮೈಸೂರು

 ದಸರಾ ಪ್ರಾಧಿಕಾರ ರಚನೆಗೆ ಚಿಂತನೆ : ಸಚಿವ  ವಿ. ಸೋಮಣ್ಣ

ಮೈಸೂರು, ಸೆ. 11 :-  ನಾಡಹಬ್ಬ ದಸರಾ ಆಚರಣೆಗೆ ಸೀಮಿತವಾಗಿ ದಸರಾ ಪ್ರಾಧಿಕಾರ ರಚನೆಗೆ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು  ವಸತಿ ಸಚಿವರೂ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಇಂದು ದಸರಾ ಮಹೋತ್ಸವ ಆಚರಣೆ ಸಂಬಂಧ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಮಾಜಿ ಮೇಯರ್ ಗಳ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಮೇಯರ್ ಗಳ ಅವಧಿಯಲ್ಲಿ ಭಿನ್ನ ರೀತಿಯಲ್ಲಿ ದಸರಾ ಆಚರಿಸಿರುವ ಅನುಭವ ಹೊಂದಿದ್ದೀರಿ. ಈ ಬಾರಿ ಎಲ್ಲ ಮಾಜಿ ಮೇಯರ್ ಗಳು ನಮ್ಮೊಂದಿಗೆ ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ತಮ್ಮ ಅನುಭವಗಳನ್ನು ನಮಗೆ ಧಾರೆ ಎರೆಯಿರಿ ಎಂದು ಮನವಿ ಮಾಡಿದರು. ದಸರಾ ಮೆರವಣಿಗೆ ವೇಳೆ ಈ ಹಿಂದೆ ಆಗಿರುವ ಎಲ್ಲ ಬಗೆಯ ಗೊಂದಲಗಳಿಗೆ ತೆರೆ ಎಳೆಯಲಾಗುವುದು. ಜಂಬೂಸವಾರಿ ಮೆರವಣಿಗೆಯು ಯಾವುದೇ ಲೋಪಗಳಿಲ್ಲದೆ ಶಿಸ್ತುಬದ್ಧವಾಗಿ ಸಾಗುವಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ಮಾಜಿ ಮೇಯರ್ ಹಾಗೂ ಮಾಜಿ ಉಪಮೇಯರ್ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಿಗೆ ಜಂಬೂಸವಾರಿ ವೀಕ್ಷಣೆಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ದಸರಾ ಪಾಸ್ ಗಳ ವಿತರಣೆಯಲ್ಲಿ ಆಗುತ್ತಿದ್ದ ಗೊಂದಲಗಳಿಗೆ ಮುಕ್ತಿ ಹಾಡಿ, ಪಾಸುಗಳು ಅರ್ಹರಿಗೆ ತಲುಪುವ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಜಂಬೂಸವಾರಿ ಮೆರವಣಿಗೆಯನ್ನು ಜನಸಾಮಾನ್ಯರು ವೀಕ್ಷಿಸುವಂತಹ ವಾತಾವರಣ ನಿರ್ಮಿಸಲಾಗುವುದು ಎಂದರು.
ಎಲ್ಲರೂ ಮುಕ್ತ ಮನಸ್ಸಿನಿಂದ ನಾಡಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸತನಕ್ಕೆ ತೆರೆದುಕೊಂಡು, ಸಾಂಸ್ಕೃತಿಕ ಹಿರಿಮೆಯನ್ನು ಸಾರೋಣ ಎಂದರು.
ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತ ಜಗನ್ನಾಥ್, ಮಾಜಿ ಶಾಸಕ ಬಿ.ಆರ್. ತೋಂಟಾದಾರ್ಯ, ಮಾಜಿ ಮೇಯರ್ ಗಳಾದ ಸಂದೇಶ್ ಸ್ವಾಮಿ, ಬಿ.ಎನ್. ಮೋದಾಮಣಿ,  ಬಿ.ಎಲ್. ಭೈರಪ್ಪ, ಪುರುಷೋತ್ತಮ್, ನಾರಾಯಣ,  ಲಿಂಗಪ್ಪ, ನರಸಿಂಹಯ್ಯಂಗಾರ್, ಅಯೂಬ್ ಖಾನ್, ದಕ್ಷಿಣಾ ಮೂರ್ತಿ ಮುಖಂಡರಾದ ಎಚ್.ವಿ. ರಾಜೀವ್, ಯಶಸ್ವಿ ಸೋಮಶೇಖರ್ ಉಪಸ್ಠಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: