ಪ್ರಮುಖ ಸುದ್ದಿಮೈಸೂರು

ಹೊಸ ಸ್ಮಾರಕಗಳನ್ನು ನಿರ್ಮಿಸುವುದಕ್ಕಿಂತಲೂ ಅತ್ಯಮೂಲ್ಯವಾದ ಪುರಾತನ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ವಹಣೆ ಮುಖ್ಯ : ಸಚಿವ ಸಿ.ಟಿ.ರವಿ

ಮೈಸೂರು,ಸೆ.12:-  ಹೊಸ ಸ್ಮಾರಕಗಳನ್ನು ನಿರ್ಮಿಸುವುದಕ್ಕಿಂತಲೂ ಅತ್ಯಮೂಲ್ಯವಾದ ಪುರಾತನ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ವಹಣೆ ಮುಖ್ಯವಾಗಿದೆ. ಹೀಗಾಗಿ ಅರಣ್ಯ ಸಮಿತಿ ಇರುವಲ್ಲಿ ಅವರಿಂದ ಹಾಗೂ ಅರಣ್ಯ ಸಮಿತಿಗಳು ಇಲ್ಲದೇ ಇರುವ ಕಡೆಗಳಲ್ಲಿ ಸಮಿತಿಯನ್ನು ರಚನೆ ಮಾಡಿ, ಅವರಿಂದಲೇ ಸೆಕ್ಯುರಿಟಿ, ಗೈಡ್‌ ಹಾಗೂ ಸ್ಥಳೀಯ ವಸ್ತುಗಳ ಮಾರಾಟ ಮತ್ತು ನಿರ್ವಹಣೆ ಮಾಡಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸಲಹೆ ನೀಡಿದರು.

ನಿನ್ನೆ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಸರಾ ಪೂರ್ವಭಾವಿ ಸಿದ್ದತಾ ಸಭೆ ಹಾಗೂ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಗ್ರಾಮಗಳ ಇತಿಹಾಸವನ್ನು ಪರಿಚಯಿಸಲು ಪಿ.ಯು.ಸಿ ಹಾಗೂ ಪದವಿ ಕಲಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಪ್ರತಿಯೊಂದು ಗ್ರಾಮಗಳ ಕಲೆ, ಕಸುಬು, ಪರಂಪರೆ, ಧಾರ್ಮಿಕ ಮುಂತಾದ ಇತಿಹಾಸಗಳನ್ನು ಸಂಗ್ರಹಿಸಿ ಜಿಲ್ಲಾ ಮಟ್ಟದ ಕಮಿಟಿಯು ಅದನ್ನು ಪರಿಶೀಲನೆ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಇದರಿಂದ ಗ್ರಾಮಗಳ ಇತಿಹಾಸ ತಿಳಿಯಲು ಸುಲಭವಾಗುತ್ತದೆ. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ,” ಎಂದರು.

ಮೈಸೂರು ದಸರಾ ಮಹೋತ್ಸವದಲ್ಲಿ ಹೆಚ್ಚಿನ ಪ್ರವಾಸಿಗರು ಪಾಲ್ಗೊಳ್ಳಲು ತಕ್ಷಣದಿಂದ ರೈಲ್ವೆ ಬೋಗಿಗಳ ಮೇಲೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ದಸರಾ ಜಾಹೀರಾತು ಪ್ರಚಾರ ಮಾಡಬೇಕು ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ, ಸರಕಾರಿ ಬಸ್‌ ಹಾಗೂ ಅಂತಾರಾಜ್ಯ ಮ್ಯಾಗಜಿನ್‌ಗಳಲ್ಲಿ ದಸರಾ ಜಾಹೀರಾತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಮಾಡಿ ಹೆಚ್ಚು ಪ್ರವಾಸಿಗರನ್ನು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಿ,” ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಸಿಗರಿಗೆ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಸಂಸ್ಕೃತಿ, ರಾಮನಗರದಲ್ಲಿ ಆಹಾರ ಸಂಸ್ಕೃತಿ ಪರಿಚಯ ಮಾಡಲು ಸೂಚಿಸಿದ್ದೇನೆ. ಅದೇ ರೀತಿ ಮೈಸೂರಿನ ಪಾರಂಪರಿಕ ಸಂಸ್ಕೃತಿಯನ್ನು ಪರಿಚಯ ಮಾಡಲು ದಸರಾ  ಹಬ್ಬ ಉತ್ತಮ ವೇದಿಕೆಯಾಗಿದ್ದು, ಇಂತಹ ಸಂದರ್ಭದಲ್ಲಿ ಮೈಸೂರಿನ ಹೊಸತನದ ವೈಶಿಷ್ಟ್ಯತೆಯನ್ನು ಪರಿಚಯಿಸಲು ಪ್ರಯತ್ನಿಸಬೇಕು ಎಂದರು.

ಸಭೆಯಲ್ಲಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: