ಮೈಸೂರು

ಎಂಟು ವರ್ಷಗಳ ಹಿಂದೆ ನಡೆದ ಕೊಲೆಗೆ ಮರುಜೀವ : ಆರೋಪಿ ಬಂಧನ

ಎಂಟು ವರ್ಷಗಳ ಹಿಂದೆ ಪತ್ನಿ ಹಾಗೂ ನಾದಿನಿಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು  ಅಜೀಜ್ ಸೇಠ್ ನಗರದ ಬೀಡಿಕಾಲೋನಿ ನಿವಾಸಿ ಇಸಾಕ್ ಪಾಷಾ ಎಂದು ಗುರುತಿಸಲಾಗಿದೆ. ಈತ 2009ರಲ್ಲಿ ಪತ್ನಿ ಸುರಯ್ಯಭಾನು ಹಾಗೂ ನಾದಿನಿ ಸಿದ್ದಕಿಭಾನು ಎಂಬವರನ್ನು ಕೊಲೆಗೈದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಪತ್ನಿಯ ಶೀಲ ಶಂಕಿಸಿ ಮರಗೆಲಸದ ಉಳಿಯಿಂದ ಪತ್ನಿಯ ಕುತ್ತಿಗೆ ಇರಿದು ಕೊಲೆ ಮಾಡಿದ್ದ. ಅಕ್ಕನ ರಕ್ಷಣೆಗೆಂದು ಬಂದ ತನ್ನ ನಾದಿನಿಗೂ ಇರಿದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆತನ ನಾದಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ದಿನಗಳ ನಂತರ ಮೃತಪಟ್ಟಿದ್ದರು. 2009ರಲ್ಲಿ ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ಪ್ರಕರಣ ದಾಖಲಾಗಿತ್ತು.

ಕೊಲೆ ಮಾಡಿ ರಾಜಸ್ಥಾನದತ್ತ ಪಯಣ ಬೆಳೆಸಿದ್ದ. ಆರೋಪಿ ಪತ್ತೆಯಾಗದಿರುವುದಕ್ಕೆ ತನಿಖೆಯನ್ನು  ಪೊಲೀಸರು ಅಲ್ಲಿಗೇ ಮೊಟಕುಗೊಳಿಸಿದ್ದರು. ಇದೀಗ ಬೆಂಗಳೂರಿನ ಡಿ.ಜಿ.ಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಈತ ಬಂದು ಹೋಗಿ ಮಾಡುತ್ತಿರುವ ವಿಚಾರವನ್ನು ಪೊಲೀಸರಿಗೆ ಯಾರೋ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು  ಬೆಂಗಳೂರಿನಲ್ಲಿ ವಾಸವಿರುವ ಖಚಿತ ಮಾಹಿತಿಯನ್ನು ಪಡೆದು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಸ್ಥಳಕ್ಕೆ ಆರೋಪಿಯನ್ನು ಕರೆತಂದು ಮಹಜರು ನಡೆಸಲಾಯಿತು. ಆತನನ್ನು ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರಲ್ಲಿ ಆತ ತಾನೇ ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ  ಎನ್ನಲಾಗಿದೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

comments

Related Articles

error: