ದೇಶಮನರಂಜನೆ

ತುಳು ಸಿನಿಮಾ `ಗಿರಿಗಿಟ್’ ಗೆ ತಡೆಯಾಜ್ಞೆ ನೀಡಿದ ಕೋರ್ಟ್

ಮಂಗಳೂರು,ಸೆ.12-ಯಶಸ್ವಿ ಪ್ರದರ್ಶನ ಕಾಣುತ್ತಿರುವ ತುಳು ಸಿನಿಮಾ `ಗಿರಿಗಿಟ್’ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಹರೀಶ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಚಿತ್ರದಲ್ಲಿ ನ್ಯಾಯಾಂಗ ಮತ್ತು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘ ನ್ಯಾಯಾಲಯಕ್ಕೆ ದೂರು ನೀಡಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ಎಂ.ಪಿ ಶೆಣೈ ವಾದ ಮಂಡಿಸಿದ್ದರು.

ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ, ನಟ ರೂಪೇಶ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಬೇಸರವಾಗಿದೆ. ನಮಗೆ ಎಲ್ಲೂ ಮಾತನಾಡಲು ಅವಕಾಶ ಸಿಗಲಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ ಹೀಗೆ ಏಕಾಏಕಿ ತಡೆಯಾಜ್ಞೆ ನೀಡಿದ್ದಾರೆ. ನಾವು ಯಾವುದೇ ಅಪರಾಧ ಮಾಡಿಲ್ಲ. ಒಬ್ಬ ಬೇಜವಾಬ್ದಾರಿಯ ವಕೀಲನನ್ನು ತಮಾಷೆಯ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವಷ್ಟೇ. ನಮಗೆ ಸೆನ್ಸಾರ್‌ ಮಂಡಳಿ ಕೂಡಾ ಯು ಸರ್ಟಿಫಿಕೇಟ್‌ ನೀಡಿದೆ. ಆದರೂ ಈ ತಡೆಯಾಜ್ಞೆ ಯಾಕೆಂದು ಅರ್ಥವಾಗುತ್ತಿಲ್ಲ. ಕಾನೂನು ಹೋರಾಟ ಅಥವಾ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಗಿರಿಗಿಟ್‌ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವುದು ಕೋಸ್ಟಲ್‌ ವುಡ್‌ ಗೆ ಆಘಾತಕಾರಿ ವಿಚಾರ. ಒಂದು ದೃಶ್ಯದಲ್ಲಿ ವಕೀಲರಿಗೆ ನಿಂದನೆಯಾಗಿದೆ ಎಂದು ಸಂಪೂರ್ಣ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿದೆ. ತಡೆಯಾಜ್ಞೆ ಹಿಂಪಡೆಯುವಂತೆ ಮನವಿ ಸಲ್ಲಿಸಲು ತುಳು ಚಿತ್ರ ರಂಗದ ಎಲ್ಲಾ ಕಲಾವಿದರು ನ್ಯಾಯಾಲಯ ಸಂಕೀರ್ಣದಲ್ಲಿ ಸೇರಬೇಕೆಂದು ತುಳು ಕಲಾವಿದರ ಒಕ್ಕೂಟ ಮನವಿ ಮಾಡಿದೆ.

ರೂಪೇಶ್‌ ಶೆಟ್ಟಿಯವರು ನಾಯಕನಾಗಿ ಗಿರಿಗಿಟ್‌ ಚಿತ್ರದಲ್ಲಿ ನಟಿಸಿದ್ದು, ಶಿಲ್ಪ ಶೆಟ್ಟಿಯವರು ನಾಯಕಿಯಾಗಿದ್ದಾರೆ. ಅರವಿಂದ್ ಬೋಳಾರ್‌ ಅವರು ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಭೋಜರಾಜ ವಾಮಂಜೂರು, ನವೀನ್‌ ಪಡೀಲ್‌, ಪ್ರಸನ್ನ ಶೆಟ್ಟಿ ನಟಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: