
ಮೈಸೂರು
ಕರೆಯದ ಕಾರ್ಯಕ್ರಮಗಳಿಗೆ ನಾನೇಕೆ ಹೋಗಲಿ, ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ : ಜೆಡಿಎಸ್ ವಿರುದ್ಧ ಶಾಸಕ ಜಿ ಟಿ ದೇವೇಗೌಡ ಅಸಮಾಧಾನ
ಮೈಸೂರು,ಸೆ.12:- ಜೆಡಿಎಸ್ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ. ಕರೆಯದ ಕಾರ್ಯಕ್ರಮಗಳಿಗೆ ನಾನೇಕೆ ಹೋಗಲಿ. ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ, ಜೆಡಿಎಸ್ನಲ್ಲಿ ನನಗೆ ಸಾಕಷ್ಟು ನೋವು ನೀಡಿದ್ದಾರೆ ಎಂದು ಶಾಸಕ ಜಿ ಟಿ ದೇವೇಗೌಡ ಬಹಿರಂಗವಾಗಿ ಜೆಡಿಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಜೆಡಿಎಸ್ ನನಗೆ ನೋವು ನೀಡಿದೆ. ಅಧಿಕಾರ ಸಿಗಲಿಲ್ಲ. ಸಹಕಾರ ಖಾತೆ ಕೊಡಿಸುತ್ತೇವೆ ಎಂದು ಹೇಳಿದರು. ಬಂಡೆಪ್ಪ ಕಾಶೆಂಪೂರ್ ಬಿಡಲಿಲ್ಲ ಎಂದು ತಪ್ಪಿಸಿದರು. ಅಬಕಾರಿ ಕೊಡುತ್ತೇನೆ ಅಂತ ಹೇಳಿ ಕೊನೆಗೆ ಅದನ್ನೂ ಕೊಡಲಿಲ್ಲ. ಸಾ.ರಾ.ಮಹೇಶನಿಗೆ ಜಿಲ್ಲಾ ಉಸ್ತುವಾರಿ ನೀಡಲು ರೆಡಿ ಆಗಿದ್ದರು. ಇದನ್ನು ಅವರ ಕುಟುಂಬದವರೇ ಬಂದು ನನಗೆ ಹೇಳಿದ ಮೇಲೆ ಕೊಟ್ಟ ಖಾತೆ ಸ್ವೀಕರಿಸಿದೆ. ನಾನು 8 ನೇ ಕ್ಲಾಸ್ವರೆಗೆ ಓದಿದ್ದೇನೆ ಎನ್ನುವ ಕಾರಣಕ್ಕೆ ಉನ್ನತ ಶಿಕ್ಷಣ ಖಾತೆ ಕೊಟ್ಟರು ಎಂದು ಅಳಲು ತೋಡಿಕೊಂಡರು.
ಹುಣಸೂರು ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ ನನ್ನ ಮಗ ಸ್ಪರ್ಧೆ ಮಾಡಲ್ಲ ಎಂದು ಜೆಡಿಎಸ್ ವರಿಷ್ಠರ ಸಮ್ಮುಖದಲ್ಲೇ ಹೇಳಿದ್ದೇನೆ. ಚಾಮುಂಡೇಶ್ವರಿ ಬಿಟ್ಟು ನಾನು ಬೇರೆ ಕ್ಷೇತ್ರಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.
ನಾನು ಯಾರ ಹಂಗಲ್ಲೂ ಇಲ್ಲ. ಎಚ್.ಡಿ. ದೇವೇಗೌಡರು, ಕುಮಾರಸ್ವಾಮಿ ನನ್ನ ಗುರು ಅಲ್ಲ ಅಂತ ನಾನು ಎಲ್ಲಿಯೂ ಹೇಳಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಕಲಾಮಂದಿರದಲ್ಲಿ ಘೋಷಣೆ ಮಾಡಿದ್ದೇ ನಾನು. ಕಳೆದ ಚುನಾವಣೆಯಲ್ಲೂ ಚಾಮುಂಡಿ ಬೆಟ್ಟದಲ್ಲಿ ಕುಮಾರ ಪರ್ವ ಶುರುವಾಗಿದ್ದು ನನ್ನ ಕ್ಷೇತ್ರದಿಂದ. ಆಗೆಲ್ಲ ನಾನು ಪಕ್ಷಕ್ಕೆ ದುಡಿದಿದ್ದೇನೆ. ಮೈಸೂರಿನಲ್ಲಿ ಯಾವುದೇ ಜೆಡಿಎಸ್ ಕಾರ್ಯಕ್ರಮ ಆಯೋಜನೆ ಆದಾಗಲೂ ಕೆ.ಆರ್.ನಗರದಿಂದ ಹತ್ತು ಜನ ಬಂದಿಲ್ಲ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದರು. (ಕೆ.ಎಸ್,ಎಸ್.ಎಚ್)