ಪ್ರಮುಖ ಸುದ್ದಿಮೈಸೂರು

ಹೊಸ ವಿನ್ಯಾಸದೊಂದಿಗೆ ದೀಪಾಲಂಕಾರ ವ್ಯವಸ್ಥೆ : ಸಚಿವ ವಿ.ಸೋಮಣ್ಣ

ಮೈಸೂರು ‌ಸೆ.12:- ಮೈಸೂರು ದಸರಾ ಮಹೋತ್ಸವದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುವಂತೆ ಈ ಬಾರಿ ಹೊಸ ವಿನ್ಯಾಸದೊಂದಿಗೆ ದೀಪಾಲಂಕಾರ ವ್ಯವಸ್ಥೆ ರೂಪಿಸಲಾಗಿದೆ ‌ಎಂದು ವಸತಿ ಸಚಿವ ಹಾಗೂ‌ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ   ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿಂದು ನಡೆದ ದಸರಾ ವಿದ್ಯುತ್ ದೀಪಾಲಂಕಾರದ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯ ‌ಕಾಮಗಾರಿ‌ ಸೆಪ್ಟೆಂಬರ್ 25 ರೊಳಗೆ ಸಂಪೂರ್ಣ ಮುಗಿದಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಬಾರಿ ಸುಮಾರು 75 ಕಿ.ಮೀ ರಸ್ತೆ ಹಾಗೂ 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುವುದು ಹಾಗೂ 12 ವಿವಿಧ ರೀತಿಯ ವಿಶೇಷ ಪ್ರತಿಕೃತಿಗಳನ್ನು ಮಾಡಲಾಗುವುದು. ಅದರಲ್ಲೂ ಪಶ್ಚಿಮ ಬಂಗಾಳದ ದುರ್ಗಾ ದೇವಿಯ ಪೂಜೆಯ ಮಾದರಿಯ ಪ್ರತಿಕೃತಿಯನ್ನು 5 ಕಡೆಗಳಲ್ಲಿ ಹಾಕಲಾಗುವುದು ಎಂದರು.

ಈ ಬಾರಿ ಸುಮಾರು 1.5 ಮೆಗಾವ್ಯಾಟ್ ಬೇಡಿಕೆಯಿದ್ದು, 1 ಲಕ್ಷ ಯುನಿಟ್ ಬೇಕಾಗಲಿದೆ. ಹಾಗಾಗಿ ನಗರದ ರಾಜಮಾರ್ಗ ಹಾಗೂ ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ಉಳಿತಾಯದ ಉದ್ದೇಶದಿಂದ ಎಲ್.ಇ.ಡಿ ಬಲ್ಪ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ಚೆಸ್ಕಾಂ ವತಿಯಿಂದ ಶ್ರೀರಂಗಪಟ್ಟಣದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಚಾಮರಾಜನಗರದಲ್ಲಿ 15 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದ ದಸರಾ ವಿದ್ಯುತ್ ‌ದೀಪಾಲಂಕಾರಕ್ಕೆ ಸುಮಾರು 3 ಕೋಟಿಗೂ ಮೇಲ್ಪಟ್ಟು ವೆಚ್ಚವಾಗಲಿದೆ ಎಂದು ತಿಳಿಸಿದರು.

ಈ ಬಾರಿ ಪ್ರವಾಸಿಗರು ‌ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಚಾಮುಂಡೇಶ್ವರಿ ತೆಪ್ಪೋತ್ಸವದವರೆಗೂ ಇರಬೇಕು ಎಂದು ತಿಳಿಸಿದರು.

ಗುತ್ತಿಗೆದಾರರು ಪರಸ್ಪರವಾಗಿ ಒಗ್ಗೂಡಿ ಕೆಲಸ ನಿರ್ವಹಿಸಬೇಕು ಹಾಗೂ ಸರ್ಕಾರ ಮತ್ತು ಅಧಿಕಾರಿಗಳನ್ನು ಸಾಮಾನ್ಯ ಸಾರ್ವಜನಿಕರು ದೀಪಾಲಂಕಾರ ವ್ಯವಸ್ಥೆ ಸರಿಯಿಲ್ಲ ಎಂದು ಮಾತನಾಡುವಾಗೆ ಮಾಡಬೇಡಿ ಎಂದು ತಿಳಿಸಿದರು. ಹೊಸಬಗೆಯ ಎಲ್.ಇ.ಡಿ ಬಲ್ಪ್ ಬಳಸಬೇಕು. ಗುತ್ತಿಗೆದಾರರ ಯಾವುದೇ ಬಿಲ್ ಗಳನ್ನು ತಡಮಾಡದೇ ಬಿಡುಗಡೆ ಮಾಡಲಾಗುವುದು. ಸರ್ಕಾರ ನಿಮ್ಮ ಜೊತೆ ಇರಲಿದೆ‌‌ ಎಂದು ಅಭಯ ನೀಡಿದರು.

ಚೆಸ್ಕಾಂ ವ್ಯವಸ್ಥಾಪಕ‌ ನಿರ್ದೇಶಕರಾದ ಡಾ. ಹೆಚ್.ಎನ್ ಗೋಪಾಲಕೃಷ್ಣ ಅವರು ಮಾತನಾಡಿ ಸಾರ್ವಜನಿಕರು ದೀಪಾಲಂಕಾರ ವೀಕ್ಷಣೆಯ ಸಂದರ್ಭದಲ್ಲಿ  ನೋಡಿ ಆನಂದಿಸಬೇಕು ಹೊರತು ವಿದ್ಯುತ್ ದೀಪಗಳನ್ನು ಮುಟ್ಟಬಾರದು ಯಾವುದೇ ತರಹದ ಅನಾಹುತಕ್ಕೆ ಎಡೆಮಾಡಿಕೊಡದೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ವೃತ್ತಗಳಲ್ಲಿ ಎಇ ಮತ್ತು ಲೈನ್ ಮ್ಯಾನ್ ಗಳನ್ನು ನಿಯೋಜಿಸಲಾಗುವುದು. ವಿದ್ಯುತ್ ಸೇವೆಯ ವಾಹನಗಳ ದಿನದ 24 ಗಂಟೆಯು ಸೇವೆಯಲ್ಲಿ ಇರುತ್ತವೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: