
ಪ್ರಮುಖ ಸುದ್ದಿ
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೆ ಇಡಿ ಹತ್ತು ದಿನಗಳ ಕಸ್ಟಡಿ ಇಂದು ಅಂತ್ಯ : ರಾಮನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್
ದೇಶ(ನವದೆಹಲಿ)ಸೆ.13:- ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಜಾರಿ ನಿರ್ದೇಶನಾಲಯದ 10 ದಿನಗಳ ಕಸ್ಟಡಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ ದಿನ ರಾಮನಗರ ಮತ್ತು ಕನಕಪುರದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಕೆಲವು ಕಿಡಿಗೇಡಿಗಳು ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಡಿ.ಕೆ. ಶಿವಕುಮಾರ್ ಅವರನ್ನು ಮತ್ತೆ ಇ.ಡಿ. ಕಸ್ಟಡಿಗೆ ಒಪ್ಪಿಸಿದರೂ ರಸ್ತೆ ತಡೆ, ಪ್ರತಿಭಟನೆ ನಡೆಸಲು ಅನುಮತಿ ನೀಡುವುದಿಲ್ಲ. ರಸ್ತೆ ತಡೆ ನಡೆಸಿ ಗಲಾಟೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಭದ್ರತೆಗಾಗಿ ಹೆಚ್ಚುವರಿಯಾಗಿ ಕೆಎಸ್ಆರ್ಪಿ, ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ರಾಮನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡಿಕೆಶಿ ಕಸ್ಟಡಿ ಇಂದು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಇ.ಡಿ. ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈ ವೇಳೆ ಇ.ಡಿ. ಅಧಿಕಾರಿಗಳು ಮತ್ತಷ್ಟು ದಿನ ಕಸ್ಟಡಿ ವಿಸ್ತರಣೆಗೆ ಮನವಿ ಮಾಡುವ ಸಾಧ್ಯತೆ ಇದೆ. ಇಂದೇ ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆ ಸಹ ನಡೆಯಲಿದೆ.
108 ಕೋಟಿ ರೂ. ಬೇನಾಮಿ ಆಸ್ತಿ ಹೊಂದಿದ ಆರೋಪದಲ್ಲಿ ಡಿಕೆಶಿ ಪುತ್ರಿ ಐಶ್ವರ್ಯಾರನ್ನು ಇ.ಡಿ ಅಧಿಕಾರಿಗಳು ನಿನ್ನೆ ವಿಚಾರಣೆ ನಡೆಸಿದ್ದರು. ಇಂದೂ ಸಹ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಶ್ವರ್ಯ ಇಂದು ಇ.ಡಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. (ಕೆ.ಎಸ್,ಎಸ್.ಎಚ್)