ಕರ್ನಾಟಕಮೈಸೂರು

ದಿನೇಶ್ ಗುಂಡೂರಾವ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಸಂಸದ ಪ್ರತಾಪ್ ಸಿಂಹ ಲೇವಡಿ

ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಲೇವಡಿಯಾಡಿದ ಸಂಸದ ಪ್ರತಾಪ್ ಸಿಂಹ, ದಿನೇಶ್ ಅವರು  ಹಿರಿಯ ರಾಜಕಾರಣಿ ಬಗ್ಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ವ್ಯವಧಾನವಿಲ್ಲದೆ ವೈಯುಕ್ತಿಕವಾಗಿ ನಿಂದಿಸಿರುವುದು ಖಂಡನಾರ್ಹ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಕಳೆದ ಮಂಗಳವಾರ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಆರೋಪಿಸುವ ಭರಾಟೆಯಲ್ಲಿ ದಿನೇಶ್ ಗುಂಡೂರಾವ್ ಬಳಸಿರುವ ಶಬ್ದಗಳನ್ನು ಖಂಡಿಸಿ, ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕವಾಗಿ ಪ್ರತಿಕ್ರಿಯಿಸುವಾಗ ಸಂಯಮದಿಂದ ವರ್ತಿಸಬೇಕು, ಬಳಸುವ ಪದಗಳು ಅವರ ಸ್ಥಾನಕ್ಕೆ ಚ್ಯುತಿ ತರಬಹುದೆನ್ನುವ ಕನಿಷ್ಠ ಜ್ಞಾನವಿರಬೇಕು, ಮುಖ್ಯಮಂತ್ರಿಯ ಮಗನಾಗಿ ತಂದೆಯಿಂದ ಕಲಿತಿರುವ ಸಂಸ್ಕಾರ ಇದೇನಾ ಎಂದು ಖಾರವಾಗಿ ಪ್ರಶ‍್ನಿಸಿ, ಹಿರಿಯರಿಗೆ ಗೌರವ ಕೊಡಿ, ಸರ್ವಾಧಿಕಾರಿ ಧೋರಣೆ ಬಿಟ್ಟು ನಾಲಿಗೆಗೆ ಕಡಿವಾಣ ಹಾಕಿ ಎಂದು ನೇರವಾಗಿ ಎಚ್ಚರಿಸಿದರು.

ಈಗಾಗಲೇ ಕಾಂಗ್ರೆಸ್‍ 2018ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಹತಾಶಾ ಮನೋಭಾವವನ್ನು ತೋರ್ಪಡಿಸಿ ವೈಯುಕ್ತಿಕ ನಿಂದನೆಗಿಳಿದಿದೆ. ಡೈರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೇಕೆ ಸಿದ್ದರಾಗಿಲ್ಲ, ಲೋಕಾಯುಕ್ತವನ್ನು ತುಳಿದು, ಸರ್ಕಾರದ ಹಿಡಿತದಲ್ಲಿರುವ ಎಸಿಬಿಯಿಂದ ಪ್ರಕರಣಗಳನ್ನು ತನಿಖೆಗೊಳಪಡಿಸಲಾಗುತ್ತಿದೆ ಆದರೆ  ಹಗರಣಗಳ ಸತ್ಯಾಂಶವೂ ಎಷ್ಟರ ಮಟ್ಟಿಗೆ ಬಯಲಿಗೆ ಬರಲಿವೆ ಎನ್ನುವುದೇ ಪ್ರಶ್ನೆಯಾಗಿದೆ ಎಂದ ಅವರು, ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪ ಸಹಜ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಗದ್ಧಾರ್ ಎಂದಿದ್ದರು, ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ನರಹಂತಕನೆಂದು ಸಂಭೋದಿಸಿದ್ದರು ಇಂತಹ ಪಕ್ಷದಲ್ಲಿರುವ ನಿಮ್ಮಿಂದ ನೀತಿ ಪಾಠ ಹೇಳಿಸಿಕೊಳ್ಳುವ ಕಾಲ ಬಿಜೆಪಿಗೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ತನಿಖೆಗೆ ಸಹಕರಿಸಿ : ಡೈರಿ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಲಿತರಾಗಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಚಿಕ್ಕರಾಯಪ್ಪ ಬಾಯಿ ಬಿಟ್ಟರೆ ಸರ್ಕಾರದ ಬಂಡವಾಳ ಹೊರಬರುವ ಭಯದಿಂದ ಆತನಿಗೆ ತಲೆಮರೆಸಿಕೊಳ್ಳಲು ಸಹಕರಿಸಿ ಪೊಲೀಸ್ ಇಲಾಖೆಯನ್ನು ನಿಷ್ಪ್ರಯೋಜಕವನ್ನಾಗಿಸಿದ್ದಾರೆ. ಡೈರಿ ಹಗರಣ ತನಿಖೆಗೊಳಗಾದರೆ ಜೈಲುಪಾಲಾಗುವ ಭಯದಲ್ಲಿ ಸಿದ್ದರಾಮಯ್ಯನವರು ಬಿಜೆಪಿ ಮುಖಂಡರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ನಿರಪರಾಧಿಗಳಾಗಿದ್ದರೆ ತನಿಖೆಗೆ ಸಿದ್ಧರಾಗಿ ಎಂದು ಸವಾಲೆಸೆದು, ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ದಾಳಿಗೆ ಸಂಭಂದಿಸಿದಂತೆ ಪ್ರತಿಕ್ರಿಯಿಸಿ ಸ್ವಯಂ ಕಾಂಗ್ರೆಸ್‍ನವರೇ ದಾಳಿ ನಡೆಸಲು ಇಲಾಖೆಗೆ ಮಾಹಿತಿ ನೀಡಿ ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿದರು. ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಕಡೆಯೆಲ್ಲಾ ಅಕ್ರಮ ಹಣ, ಬೇನಾಮಿ ಆಸ್ತಿ ಪತ್ತೆಯಾಗಿದ್ದು ಇದು ಇಲಾಖೆ ದಾಳಿಯೇ ಹೊರತು ಕೇಂದ್ರ ಉದ್ದೇಶಿತ ದಾಳಿಯಲ್ಲವೆಂದು ಸ್ಪಷ್ಟಪಡಿಸಿದರು.

ನಿಮ್ಮ ಭಾಷೆಯಲ್ಲಿಯೇ ಉತ್ತರ : ಬಿಜೆಪಿ ಹಿರಿಯ ಮುಖಂಡ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿಯೂ ನಿಮ್ಮ ಭಾಷೆಯಲ್ಲಿಯೇ ತಕ್ಕ ಉತ್ತರ ನೀಡಲಿದೆ ಎಂಬ ಎಚ್ಚರಿಕೆ ನೀಡಿದರು.

ಸತ್ಯಮೇವ ಜಯತೆ 2018ರಲ್ಲಿ ಫಲಿತಾಂಶ : ಸರ್ಕಾರ, ಬಿಜೆಪಿ ವಿರುದ್ಧ ನಾಳೆ ಹಮ್ಮಿಕೊಂಡಿರುವ ಸತ್ಯಮೇವ ಜಯತೇ ಪ್ರತಿಭಟನೆ ಫಲಿತಾಂಶ 2018ರ ಚುನಾವಣೆಯ ಜನಾದೇಶದಿಂದ ಬರುವುದೆಂದು ಕುಹಕವಾಡಿ, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಪ್ರತಿಭಟನೆಗೆ 500 ಜನ ಸೇರಿಸಲು ಹೆಣಗಾಡುವ ದುರ್ಗತಿ ಕಾಂಗ್ರೆಸ್ಗೆ ಒದಗಿದ್ದು ಹಣ,ಹೆಂಡದ ಅಮಿಷವೊಡ್ಡಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಸಿದ್ಧತೆ ನಡೆಸಿದೆ ಎಂದ ಅವರು, ಸಿದ್ದರಾಮಯ್ಯ ಜೈಲುಪಾಲಾಗಲಿ ಎಂದು ಬಯಸುವುದಿಲ್ಲ, ಆದರೆ ಆರೋಪಗಳು ಬಂದಾಗ ವ್ಯವಧಾನದಿಂದ ಎದುರಿಸುವ, ಸಮರ್ಥಿಸುವ ಹೃದಯವಂತಿಕೆ ಇರಬೇಕು ಎಂದರು.

ಮೈಸೂರು ನಗರ ಜಿಲ್ಲಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Leave a Reply

comments

Related Articles

error: