ಮೈಸೂರು

ಸೆ.19: ಗಾನಭಾರತಿಯಲ್ಲಿ ಆರ್‍ಎನ್ ಶ್ರೀಲತಾ  ಗಾಯನ ಕಾರ್ಯಕ್ರಮ

ಮೈಸೂರು,ಸೆ.13:- ಸೆಪ್ಟೆಂಬರ್ 19ರಂದು ಸಂಜೆ 6 ಗಂಟೆಗೆ ವಿದುಷಿ ಡಾಆರ್‍ಎನ್ ಶ್ರೀಲತಾ ಅವರ ಗಾಯನ ಕಾರ್ಯಕ್ರಮವನ್ನು ಗಾನಭಾರತೀ ಹಮ್ಮಿಕೊಂಡಿದೆ. ಅವರೊಂದಿಗೆ ವಯೋಲಿನಿನಲ್ಲಿ ವಿದುಷಿ ವೀಣಾ ಸುರೇಶ್,ಮೃದಂಗದಲ್ಲಿ ವಿದ್ವಾನ್ ಜಿ ಎಸ್‍ರಾಮಾನುಜನ್‍ ಮತ್ತು ಮೋರ್ಸಿಂಗಿನಲ್ಲಿ ವಿದ್ವಾನ್ ವಿ ಎಸ್‍.ರಮೇಶ್ ಸಹಕರಿಸಲಿದ್ದಾರೆ.

ಸಂಗೀತದ ಮನೆತನದಲ್ಲೇ ಬೆಳೆದು ಬಂದ ವಿದುಷಿ ಡಾಆರ್‍ಎನ್ ಶ್ರೀಲತಾ ಇಂದು ಇವರು ಕರ್ನಾಟಕ ಸಂಗೀತ ಕ್ಷೇತ್ರದ ಮುಂಚೂಣಿಯಲ್ಲಿರುವ ಕಲಾವಿದರು. ಆಕಾಶವಾಣಿಯ ‘ಎ ಟಾಪ್’ ಕಲಾವಿದೆ. ಮ್ಯೂಸಿಕ್ ಅಕಾಡೆಮಿಯೂ ಸೇರಿದಂತೆ ದೇಶ ವಿದೇಶಗಳ ಪ್ರಖ್ಯಾತ ಸಭೆಗಳಲ್ಲಿ ಕಾರ್ಯಕ್ರಮ ನೀಡಿ ಕಲಾಭಿಮಾನಿಗಳ, ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ.

ಸಂಗೀತ ಶಾಸ್ತ್ರದಲ್ಲಿ ಅಪಾರ ಪರಿಣತಿ ಹೊಂದಿರುವ ಇವರು ಕರ್ನಾಟಕ ಸಂಗೀತದಲ್ಲಿ  ಮನೋಧರ್ಮ ಸಂಗೀತವನ್ನು ಕುರಿತು ಪ್ರೌಢ ಪ್ರಬಂಧ ರಚಿಸಿದ್ದಾರೆ. ಹಲವು ಮೌಲಿಕ ಕೃತಿಗಳು ಹಾಗೂ ಲೇಖನಗಳನ್ನು ಪ್ರಕಟಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಹಲವು ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶನ ನೀಡಿದ್ದಾರೆ.

ಗುರುಗಳಾಗಿ ಹಲವು ಉತ್ತಮ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ್ದಾರೆ. ಹಲವು ವಿಷಯಗಳನ್ನು ಕುರಿತು ಪಾಂಡಿತ್ಯ ಪೂರ್ಣ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಸಂಘಟಕಿಯಾಗಿ ಶ್ರುತಿ ಮಂಜರಿಯಂತಹ ಸಂಸ್ಥೆಯನ್ನು ಅರ್ಥಪೂರ್ಣವಾಗಿ ನಡೆಸುತ್ತಿದ್ದಾರೆ. ಸ್ವಾಭಾವಿಕವಾಗಿಯೇ ಇವರ ಸೇವೆ ಹಾಗೂ ಪಾಂಡಿತ್ಯಕ್ಕೆ ಕರ್ನಾಟಕ ಕಲಾಶ್ರೀ, ಸಂಗೀತ ಸರಸ್ವತಿ, ಅನನ್ಯ ಶಾಸ್ತ್ರಕೌಸ್ತುಭ, ಹೀಗೆ ಹಲವು ಪ್ರಶಸ್ತಿಗಳು ಸಂದಿವೆ.

ವೀಣಾ ಸುರೇಶ್ ಹಲವು ಪ್ರಖ್ಯಾತರಿಗೆ ಪಕ್ಕವಾದ್ಯ ಸಹಕಾರ ನೀಡಿರುವ ನುರಿತಕಲಾವಿದರು. ವಿದ್ವಾನ್‍ಎಚ್ ಕೆ ನರಸಿಂಹಮೂರ್ತಿ, ವಿದ್ವಾನ್ ಟಿ ಎನ್‍ಕೃಷ್ಣನ್‍ ಅವರಲ್ಲಿ ವಯೋಲಿನ್ ಅಭ್ಯಾಸ ಮಾಡಿದ್ದಾರೆ.

ಪಿ ಜಿ ಲಕ್ಷ್ಮೀನಾರಾಯಣ ಅವರ ಶಿಷ್ಯರಾದ ಜಿ.ಎಸ್‍.ರಾಮಾನುಜನ್‍ ಕರ್ನಾಟಕದ ಹಿರಿಯ ಮೃದಂಗವಾದಕರು. ಎಲ್ಲಾ ಹಿರಿಯ ಕಿರಿಯರಿಗೂ ಲಯ ವಾದ್ಯ ಸಹಕಾರ ನೀಡಿದ ಅನುಭವ ಇವರದು. ಹಿರಿಯ, ಅನುಭವಿ ಲಯ ವಾದಕರಾದ ವಿ ಎಸ್‍ರಮೇಶ್ ಪಿಜಿಎಲ್‍ ಅವರ ಶಿಷ್ಯರು. (ಎಸ್.ಎಚ್)

Leave a Reply

comments

Related Articles

error: