ಪ್ರಮುಖ ಸುದ್ದಿಮೈಸೂರು

ಗ್ರಂಥಾಲಯ ಸ್ಥಳಾಂತರಕ್ಕೆ ವಿರೋಧ : ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ಮೈಸೂರು,ಸೆ.13 : ತಾಲೂಕಿನ ಜಯಪುರ ಹೋಬಳಿಯ ಧನಗಳ್ಳಿ ಗ್ರಾಮದಲ್ಲಿದ್ದ ಗ್ರಂಥಾಲಯವನ್ನು ನಿಯಮ ಹಾಗೂ ಸುತ್ತೋಲೆಗಳಿಗೆ ವಿರುದ್ಧವಾಗಿ ಸಮೀಪದ ಡಿ. ಸಾಲುಂಡಿ ಗ್ರಾಮಕ್ಕೆ ಸ್ಥಳಾಂತರಿಸಿದ್ದು, ಸಂಬಂಧಿಸಿದವರು ಕೂಡಲೇ ಅದನ್ನು ಮತ್ತೆ ಧನಗಳ್ಳಿ ಗ್ರಾಮಕ್ಕೆ ಸ್ಥಳಾಂತರಿಸದಿದ್ದಲ್ಲಿ ಇಡೀ ಗ್ರಾಮಸ್ಥರು ಗ್ರಂಥಾಲಯ ಇಲಾಖೆ ಅಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಈ ಕುರಿತಂತೆ ಗ್ರಾಮದ ಜಗಜ್ಯೋತಿ ಬಸವೇಶ್ವರ ಯುವಕರ ಸಂಘ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಧನಗಳ್ಳಿ ಸ್ವಾಮಿ, ಹಲವಾರು ದಶಕಗಳಿಂದ ತಮ್ಮ ಗ್ರಾಮದಲ್ಲಿ ಗ್ರಂಥಾಲಯವಿತ್ತು.

ಆದರೆ ಕಟ್ಟಡ ಶಿಥಿಲವಾದ ಕಾರಣದಿಂದ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಗೊಂಡರೂ ಕಾರಣಾಂತರದಿಂದ ಅದರ ಚಟುವಟಿಕೆ ಸ್ಥಗಿತಗೊಂಡವು. ಈ ಬಳಿಕ ಬೇರೊಂದು ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿ ತಾವೆಲ್ಲ ಕಾರ್ಯತತ್ಪರರಾಗಿದ್ದ ವೇಳೆ ಗ್ರಾಪಂ ಪಿಡಿಒ ನಿರ್ಲಕ್ಷ್ಯ ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಅದನ್ನು ಡಿ. ಸಾಲುಂಡಿ ಗ್ರಾಮಕ್ಕೆ ವರ್ಗಾಯಿಸಿ, ಕಟ್ಟಡ ನಿರ್ಮಿಸಲು ಎಲ್ಲರೂ ಮುಂದಾಗಿದ್ದಾರೆ.

ಈ ವೇಳೆ ತಾವು ಹೋರಾಟ ನಡೆಸಿದುದರ ಫಲವಾಗಿ ಗ್ರಂಥಾಲಯ ಇಲಾಖೆ ಅನೇಕ ಸುತ್ತೋಲೆ ಹೊರಡಿಸಿದ್ದರೂ, ಗ್ರಾಪಂ ಕೇಂದ್ರದಲ್ಲಿಯೇ ಗ್ರಂಥಾಲಯ ಇರಬೇಕೆಂಬ ನಿಯಮವಿದ್ದರೂ ಈಗ ಅದನ್ನು ಡಿ. ಸಾಲುಂಡಿ ಗ್ರಾಮಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕೂಡಲೇ ಅದನ್ನು ರದ್ದು ಪಡಿಸದಿದ್ದರೆ ಗ್ರಂಥಾಲಯ ಇಲಾಖೆ ಅಧಿಕಾರಿಗಳ ಕಚೇರಿ ಎದುರು ಗ್ರಾಮಸ್ಥರೆಲ್ಲ ಆಮರಣಾಂತ ಉಪವಾಸ ಸತ್ಯಾಗ್ರಹ ಹಾಗೂ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಎಚ್ಚರಿಸಿದರು.

ಗ್ರಾಮದ ಮರಿಚೌಡಯ್ಯ, ಕೆಂಡಗಂಡಸ್ವಾಮಿ, ಲಿಂಗರಾಜು, ಮರಿಸ್ವಾಮಿ, ಇನ್ನಿತರರು ಹಾಗೂ ಗ್ರಾಮಸ್ಥರು ಹಾಜರಿದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: