ಮೈಸೂರು

ಕಾರು-ಲಾರಿಯ ನಡುವೆ  ಮುಖಾಮುಖಿ ಡಿಕ್ಕಿ   : ಆರ್​ಟಿಒ ಇನ್ಸಪೆಕ್ಟರ್ ಸ್ಥಳದಲ್ಲೇ ಸಾವು ; ಬನ್ನೂರು ಮುಖ್ಯರಸ್ತೆಯಲ್ಲಿ ಘಟನೆ

ಮೈಸೂರು,ಸೆ.13:- ಕಾರು-ಲಾರಿಯ ನಡುವೆ  ಮುಖಾಮುಖಿ ಡಿಕ್ಕಿ  ಸಂಭವಿಸಿದ ಪರಿಣಾಮ ಆರ್​ಟಿಒ ಇನ್ಸಪೆಕ್ಟರ್ ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ನಡೆದಿದೆ.

ಮೃತರನ್ನು ಮಳವಳ್ಳಿ ತಾಲೂಕಿನ ಶಿವನಸಮುದ್ರ ಗ್ರಾಮದ ನಿವಾಸಿ ಅಬ್ದುಲ್ ಮಜೀದ್ ಎಂಬುವರ ಪುತ್ರ ಅಬ್ದುಲ್ ನಸೀಮ(45) ಎಂದು ಗುರುತಿಸಲಾಗಿದ್ದು, ಟಿ.ನರಸೀಪುರದ ಸೋಸಲೆ ಗ್ರಾಮದ ಬಳಿ ಬನ್ನೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.   ಚಾಲಕ ಮೈಸೂರಿನ ಸವರದ್ ಎಂಬವರ ಪುತ್ರ ಫಾರುಕ್ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಬ್ದುಲ್ ಅವರು ಮಂಡ್ಯ ನ್ಯಾಯಾಲಯದಲ್ಲಿ ಪ್ರಕರಣವೊಂದರ ಮಾಹಿತಿ ನೀಡಿ ಹಿಂತಿರುಗುತ್ತಿದ್ದರು. ಕಾರು ಹಾಗೂ ಲಾರಿ ಎರಡೂ ವಾಹನಗಳು ಅತಿಯಾದ ವೇಗದಿಂದ ಬರುತ್ತಿದ್ದವೆನ್ನಲಾಗಿದ್ದು, ಇದುವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯಡಿ ಸಿಕ್ಕಿದ ಕಾರು ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬದ ಪಕ್ಕದಲ್ಲಿ ನಿಂತಿದ್ದರಿಂದ ಎಡಭಾಗದಲ್ಲಿ ಕುಳಿತಿದ್ದ ಅಬ್ದುಲ್ ನಸೀಮ್ ತಲೆ ಸೇರಿದಂತೆ ಮೇಲ್ಭಾಗಕ್ಕೆ ತೀವ್ರ ತರನಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಆರ್​ಟಿಒ ಇನ್ಸಪೆಕ್ಟರ್ ಅಬ್ದುಲ್ ಮೈಸೂರಿನ ರಾಜೀವ್ ನಗರ ನಿವಾಸಿಯಾಗಿದ್ದು, ಚಾಮರಾಜನಗರ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ವಾಹನ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆ ನಂತರ ಅಧಿಕಾರಿಯ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಇತ್ತ ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಅವನ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಘಟನೆ ಕುರಿತಂತೆ  ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: