ಮೈಸೂರು

2017-18ರ ವಿದ್ಯುತ್ ದರ ಪರಿಷ್ಕರಣೆ ಅರ್ಜಿ ಕುರಿತು ಸಭೆಯಲ್ಲಿ ವ್ಯಾಪಕ ವಿರೋಧ

ಕರ್ನಾಟಕ ವಿದ್ಯುಚ್ಛಕ್ತಿ ನಿಗಮದ ನಷ್ಟವನ್ನು ಭರಿಸಲು ದರ ಏರಿಕೆ ಮಾಡಲು ಉದ್ದೇಶಿಸಿರುವ ಕ್ರಮಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 2017-18ರ ವಿದ್ಯುತ್ ದರ ಪರಿಷ್ಕರಣೆ ಅರ್ಜಿಗಳ ಕುರಿತ ಸಾರ್ವಜನಿಕ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು.

ಬುಧವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೋರ್ಟ್ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ಚೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಿ.ಕಿರಣ್ ಚೆಸ್ಕಾಂನ ಕಾರ್ಯನಿರ್ವಹಣೆ, ಸಾಧನೆ, ಹಾಗೂ ವಿದ್ಯುತ್ ನಷ್ಟದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ದರ ಏರಿಕೆಯ ಪ್ರಸ್ತಾವನೆಯನ್ನು ಆಯೋಗದ ಮುಂದಿಟ್ಟರು. ಸರ್ಕಾರದ ಆದೇಶದಂತೆ ಎಲ್ಲಾ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಮಾಡಲು ಭರಿಸಿದ ವಿದ್ಯುತ್ ಖರೀದಿ ವೆಚ್ಚ ಆಯೋಗದ ಅನುಮೋದಿತ ವೆಚ್ಚಕ್ಕಿಂತ ದುಬಾರಿಯಾಗಿದೆ. ಹಾಗಾಗಿ ಕಂದಾಯ ಕೊರತೆ ಹೆಚ್ಚಳವಾಗಿದೆ. 2018ರ ಆರ್ಥಿಕ ವರ್ಷದಲ್ಲಿ 506.38 ಕೋಟಿ ಕಂದಾಯ ಕೊರತೆಯಿದ್ದು, ರೆಗ್ಯುಲೇಟರಿ ಅಸೆಟ್ 464.46 ಕೋಟಿ ಹಾಗೂ ಆದಾಯ 7.92 ಕೋಟಿ ಕಳೆದು 2018ಕ್ಕೆ ಒಟ್ಟು 962.93 ಕೋಟಿ ಕಂದಾಯ ಕೊರತೆ ಇದೆ. ಈ ಕಂದಾಯ ಕೊರತೆಯನ್ನು ಭರಿಸಲು ಎಲ್ಲಾ ಜಕಾತಿಗಳಿಗೆ ಪ್ರತಿ ಯೂನಿಟ್‍ಗೆ 148 ಪೈಸೆ ದರ ಏರಿಕೆ ಮಾಡುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ನೀಡಿರುವ ರೇಟಿಂಗ್‍ನಲ್ಲಿ ಚೆಸ್ಕಾಂ 8ನೇ ಸ್ಥಾನದಲ್ಲಿದ್ದು ಮತ್ತಷ್ಟು ಉತ್ತಮ ಯೋಜನೆಗಳನ್ನು ಕೈಗೊಳ್ಳಲು ದರ ಏರಿಕೆ ಅನಿವಾರ್ಯ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವುದರಿಂದ ಜನ ಕಂಗಾಲಾಗಿದ್ದಾರೆ. ಅಲ್ಲದೆ ಹಣದ ಅಪಮೌಲ್ಯದಿಂದ ಕೈಗಾರಿಕೆಗಳು ತತ್ತರಿಸಿ ಹೋಗಿವೆ. ಜತೆಗೆ ಏಪ್ರಿಲ್‍ನಿಂದ ಜಿಎಸ್‍ಟಿ ಜಾರಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಏಕಾಏಕಿ ನಷ್ಟ ಭರಿಸಿಕೊಳ್ಳಲು ವಿದ್ಯುತ್ ದರ ಏರಿಕೆ ಮಾಡುವುದನ್ನು ಸಂಘ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ತಮ್ಮ ನಿರ್ವಹಣೆಯ ದೋಷದಿಂದ ಉಂಟಾಗಿರುವ ನಷ್ಟವನ್ನು ಸಾರ್ವಜನಿಕರ ಮೇಲೆ ಹೇರುವುದು ಯಾವ ನ್ಯಾಯ. ಹಾಗಾಗಿ ಆಯೋಗ ಯಾವುದೇ ಕಾರಣಕ್ಕೂ ದರ ಏರಿಕೆ ಮನವಿಯನ್ನು ಪರಿಗಣಿಸಬಾರದು ಎಂದು ಹೇಳಿದರು.

ಬಳಿಕ ಮಾತನಾಡಿದ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಜೈನ್,  ಜಾಗತಿಕ ಆರ್ಥಿಕ ಹಿನ್ನಡೆಯಿಂದ ಕೈಗಾರಿಕಾ ಕ್ಷೇತ್ರ ಕ್ಷೀಣ ಸ್ಥಿತಿಯಲ್ಲಿದೆ. ಕೈಗಾರಿಕೆಗಳ ಉತ್ಪಾದನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಿರುವಾಗ ವಿದ್ಯುತ್‍ ದರ ಏರಿಕೆ ಮಾಡುವುದು ಸರಿಯಲ್ಲ. ರೈತ ದೇಶದ ಬೆನ್ನೆಲುಬಾದರೆ, ಕೈಗಾರಿಕೆಗಳು ದೇಶದ ಪಕ್ಕೆಲುಬು. ಹಾಗಾಗಿ ಕೈಗಾರಿಕೆಗಳಿಗೆ ತಮಿಳುನಾಡು, ಗುಜರಾತ್ ಮಾದರಿಯಲ್ಲಿ ಪ್ರೋತ್ಸಾಹ ನೀಡಬೇಕು. ಕೈಗಾರಿಕೆಗಳಿಗೆ ಬೇರೆ ಜಕಾತಿ ನಿಗದಿ ಮಾಡಬೇಕು. ಸೇವಾವಲಯವನ್ನು ಕೈಗಾರಿಕೆಗಳಿಗೆ ಸೇರಿಸಬೇಕು. ಕಳೆದ 5 ವರ್ಷಗಳಲ್ಲಿ ಸಣ್ಣ ಕೈಗಾರಿಕೆಗಳಿಂದ ವಿದ್ಯುತ್ ನಿಗಮಕ್ಕೆ 466.87 ಕೋಟಿ ಪ್ರೋತ್ಸಾಹಧನ ನೀಡಲಾಗಿದ್ದು ಕ್ರಾಸ್ ಸಬ್ಸಿಡಿಯನ್ನು ತೆಗೆದುಹಾಕಬೇಕು. ಕನ್ನಡದಲ್ಲಿ ತಕರಾರು ಅರ್ಜಿಯನ್ನು ನೀಡುತ್ತಿದ್ದು ಅದರಂತೆ ದರ ನಿರ್ಧರಣೆ ಆದೇಶವನ್ನೂ ಕನ್ನಡದಲ್ಲೇ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕೆಯ ನೀಡಿದ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ, ತಕರಾರು ಅರ್ಜಿಯನ್ನು ಕನ್ನಡದಲ್ಲಿ ನೀಡುತ್ತಿದ್ದು ದರ ನಿರ್ಧರಣೆ ಆದೇಶವನ್ನು ಕನ್ನಡದಲ್ಲಿ ನೀಡಲು ಸಾಧ್ಯವಿಲ್ಲ. ದರ ನಿಗದಿ ಪ್ರತಿ ದೇಶದ ವಿವಿಧ ರಾಜ್ಯಗಳಿಗೆ ಹೋಗುವುದರಿಂದ ಇಂಗ್ಲಿಷ್‍ನಲ್ಲೇ ನೀಡಬೇಕು. ದರ ಏರಿಕೆ ಸಂಬಂಧ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಹೆಚ್.ಡಿ.ಅರುಣ್‍ಕುಮಾರ್, ಡಿ.ಬಿ.ಮಣಿವೇಲ್ ರಾಜು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

comments

Related Articles

error: