ಕ್ರೀಡೆ

ಎಟಿಪಿ ಚಾಲೆಂಜರ್‌ ಟೂರ್ನಿ: ಸೆಮಿಫೈನಲ್ ಗೆ ಲಗ್ಗೆಯಿಟ್ಟ ಸುಮಿತ್‌ ನಗಾಲ್‌, ಪ್ರಜ್ಞೇಶ್‌ ಗುಣೇಶ್ವರನ್‌

ನವದೆಹಲಿ,ಸೆ.14- ಎಟಿಪಿ ಚಾಲೆಂಜರ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಯುವ ಟೆನ್ನಿಸ್ ಆಟಗಾರ ಸುಮಿತ್‌ ನಗಾಲ್‌ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಬಂಜಾ ಲುಕಾ (ಬೋಸ್ನಿಯಾ ಮತ್ತು ಹರ್ಜೆಗೋವಿನಾ)ದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸುಮಿತ್‌ ನಗಾಲ್ 6-2, 7-5 ನೇರ ಸೆಟ್‌ಗಳ ಅಂತರದಲ್ಲಿ ಅರ್ಜೆಂಟೀನಾದ ಫೆಡೆರಿಕೊ ಕೊರಿಯಾ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಲಗ್ಗೆಯಿಟ್ಟರು.

ಸೆಮಿಫೈನಲ್ ನಲ್ಲಿ ಸುಮಿತ್‌ ನಗಾಲ್‌ ಐದನೇ ಶ್ರೇಯಾಂಕದ ಸ್ಲೋವಾಕಿಯಾದ ಫಿಲಿಪ್‌ ಹೊರಾಸ್ಕಿ ವಿರುದ್ಧ ಸೆಣಸಲಿದ್ದಾರೆ. ಇತ್ತೀಚಿಗಷ್ಟೆ ಯುಎಸ್‌ ಓಪನ್‌ ಚೊಚ್ಚಲ ಪ್ರವೇಶ ಮಾಡಿದ್ದ ಭಾರತದ ಆಟಗಾರ ರೋಜರ್‌ ಫೆಡರರ್‌ ವಿರುದ್ಧ ಮೊದಲ ಸೆಟ್‌ ಗೆದ್ದು ನಂತರ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು.

ಇನ್ನೊಂದೆಡೆ ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನ್ನಿಸ್‌ ಟೂರ್ನಿಯ ಪುರುಷರ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ 6-4, 6-4 ನೇರ ಸೆಟ್‌ಗಳ ಅಂತರದಲ್ಲಿ ಜಪಾನ್‌ನ ಹಿರೋಕಿ ಮೊರಿಯಾ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸೆಮಿಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಜಪಾನ್‌ನ ಯಸುತಕಾ ಉಚಿಯಾಮಾ ವಿರುದ್ಧ ಪ್ರಜ್ಞೇಶ್‌ ಸೆಣಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: