ಮೈಸೂರು

ವಿಜಯ ವಿಠ್ಠಲ ಕಾಲೇಜಿನಲ್ಲಿ ಓಝೋನ್ ಪದರದ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ : ಸರ್. ಎಂ.ವಿಶ್ವೇಶ್ವರಯ್ಯನವರ   ಜನ್ಮ ದಿನಾಚರಣೆ

ಮೈಸೂರು,ಸೆ.16:- ಮೈಸೂರಿನ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿಂದು  ಓಝೋನ್ ಪದರದ ಸಂರಕ್ಷಣೆ ಕುರಿತು ವಿಶೇಷ ವಿಶೇಷ  ಉಪನ್ಯಾಸ ಕಾರ್ಯಕ್ರಮವನ್ನು ಮೈಸೂರಿನ ಯುವರಾಜ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಸುರೇಶ ಅವರು ಪ್ರಾತ್ಯಕ್ಷಿಕೆಯ ಮೂಲಕ ನಡೆಸಿಕೊಟ್ಟರು.

ಆಧುನಿಕ ಬದುಕಿನಲ್ಲಿ ಬಳಕೆಯಾಗುತ್ತಿರುವ ಪರಿಸರಕ್ಕೆ ಹಾನಿ ಮಾಡುವಂತಹ ರಾಸಾಯನಿಕಯುಕ್ತ ವಸ್ತುಗಳಾದ ರೆಫ್ರಿಜರೇಟರ್, ಎ.ಸಿ. ಮುಂತಾದವುಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳು ಭೂಮಿಯನ್ನು ಸಂರಕ್ಷಿಸುತ್ತಿರುವ ಓಝೋನ್ ಪದರಕ್ಕೆ ಹಾನಿಯುಂಟು ಮಾಡಿ ಯು.ವಿ. ರೇಡಿಯೇಷನ್ಸ್‍ನಂತಹ ಅಪಾಯಕಾರಿ ಪರಿಣಾಮಗಳಿಂದ ಭೂಮಿಗೆ ಆಪತ್ತು ಉಂಟು ಮಾಡುತ್ತಿವೆ. ಆದ್ದರಿಂದ ನಮ್ಮ ಪರಿಸರದ ಕುರಿತು ಕಾಳಜಿ ವಹಿಸಿ ನಮ್ಮ ದೈನಂದಿನ ಬದುಕಿನಲ್ಲಿ ವಿಜ್ಞಾನದ ಸಮರ್ಪಕ ಬಳಕೆ ಮತ್ತು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಓಝೋನ್ ಕುರಿತು ತಿಳಿಸಿದರು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂದೇಹಗಳ ಬಗ್ಗೆ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಸರ್. ಎಂ.ವಿಶ್ವೇಶ್ವರಯ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ   ಎಚ್. ಸತ್ಯಪ್ರಸಾದ್‍ ಮಾತನಾಡಿ  ‘ಭಾರತರತ್ನ’ ಸರ್ ಎಂ.ವಿ ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಅವರ ವ್ಯಕ್ತಿತ್ವ ಮತ್ತು ಜೀವನಶೈಲಿ,  ಶಿಸ್ತು ಮತ್ತು ಸರಳತೆಯನ್ನು ವಿದ್ಯಾರ್ಥಿಗಳು ತಮ್ಮ ಬದುಕಲ್ಲಿ ಅನುಸರಿಸಬೇಕು. ಅವರ ಜೀವನಶೈಲಿಯಿಂದ ವಿದ್ಯಾರ್ಜನೆಗಾಗಿ ಅವರು ಶ್ರಮಿಸಿದ್ದನ್ನು ಮರೆಯುವಂತಿಲ್ಲ. ಇಂತಹ ಸಾಧಕರನ್ನು ಮತ್ತು ದೇಶದ ಔನ್ನತ್ಯಕ್ಕಾಗಿ ಶ್ರಮಿಸಿದ ಅವರ ಮೌಲ್ಯಗಳನ್ನು ಅರಿತು ಅದನ್ನು ಪಾಲಿಸಬೇಕು ಎಂದು ತಿಳಿಸಿದರು.

ಕಾಲೇಜಿನ ಉಪನ್ಯಾಸಕಿ ಅನ್ನಪೂರ್ಣ ರಾವ್ ಮತ್ತು  ಮಯೂರಲಕ್ಷ್ಮಿ  ಮತ್ತಿತರರು ಉಪಸ್ಥಿತರಿದ್ದರು.

ಉನ್ನತಿ ಎಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೇಯಾ ಕಶ್ಯಪ್ ಪ್ರಾರ್ಥಿಸಿದರು, ವಿಸ್ಮಯ ಎಸ್. ದಿನೇಶ್ ಸ್ವಾಗತಿಸಿ, ಕೃತಿ ಸಿ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಹರ್ಷಿತಾ ಎಂ.ಸಿ. ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: