ಮೈಸೂರು

ಇಂಗ್ಲಿಷ ಭಾಷೆ ಕಲಿಕೆ ಸರಳ :ಪ್ರೊ.ದಯಾನಂದ ಮಾನೆ ಹೇಳಿಕೆ

ಇಂಗ್ಲೀಷ್ ಭಾಷೆ ಕಲಿಕೆ ಸರಳವಾಗಿದ್ದು, ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ಈ ಭಾಷೆ ಸಹಕಾರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ ತಿಳಿಸಿದರು.

ಮಾನಸ ಗಂಗೋತ್ರಿಯ ಶಿಕ್ಷಣ ಅಧ್ಯಯನ ವಿಭಾಗದಿಂದ ವಿಜ್ಞಾನ ಭವನದ ಸಭಾಂಗಣದಲ್ಲಿ ಇಂಗ್ಲೀಷ್ ಕಲಿಕೆಯಲ್ಲಿ ಉಂಟಾಗುವ ಸಮಸ್ಯೆ ಮತ್ತು ಸವಾಲುಗಳು ಕುರಿತು ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು ಇತ್ತೀಚಿನ ಪೀಳಿಗೆ ಆಂಗ್ಲ ಭಾಷೆ ಬದಲಿಗೆ ಸ್ಥಳೀಯ ಭಾಷೆಗೆ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಸಂಶೋಧನಾ ಗುಣಮಟ್ಟ ಕುಸಿಯುತ್ತಿದೆ ಎಂದು ತಿಳಿಸಿದರು.

ಜ್ಞಾನವು ಭಾಷೆ ಕಲಿಕೆಗೆ ಸೀಮಿತವಾಗಿಲ್ಲ. ಆದ್ದರಿಂದ ಸಂಶೋಧನಾ ಹಂತದಲ್ಲಿ ಯಾವುದೇ ಮುಜುಗರಕ್ಕೊಳಗಾಗದೆ ಶಿಸ್ತು ಬದ್ಧ ಕಲಿಯುವ ಆಸಕ್ತಿಯಿಂದ ಓದಿ, ಚಿಂತನೆ ನಡೆಸಿ ಪ್ರಬಂಧ ರಚಿಸಬೇಕು. ಏಕೆಂದರೆ ನಾವು ಬರೆಯುವ ಪ್ರಬಂಧಗಳು ಸಂಖ್ಯೆಗೆ ಸೀಮಿತವಾಗಿರದೆ ಮಹತ್ವ ಮತ್ತು ಪ್ರಭಾವ ಬೀರುವಂತಹದ್ದಾಗಿರಬೇಕು ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಶಿಕ್ಷಣ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಡಿ.ಆರ್. ಸರ್ವಮಂಗಳಾ, ಈಜಿಪ್ಟ್ ಬೆನ್ಹಾ ವಿಶ್ವವಿದ್ಯಾನಿಲಯದ ಶಿಕ್ಷಣ ಶಾಖೆ ಪ್ರಾಧ್ಯಾಪಕಿ ಮರ್ವತ್ ಎಲ್-ಡಿಬ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್.ಶ್ರೀಕಂಠಸ್ವಾಮಿ, ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಬಿ. ಪ್ರವೀಣಾ, ಬೆಂಗಳೂರು ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿಯ ಸಹಾಯಕ ನಿರ್ದೇಶಕ ಡಾ. ನಿತ್ಯಾನಂದಾರಾಧ್ಯ ಹಾಗೂ ಮಂಡ್ಯ ಶಂಕರೇಗೌಡ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಿಕ್ಟೋರಿಯಾ ರೋಶ್ ಸೇರಿದಂತೆ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

comments

Related Articles

error: