ಕರ್ನಾಟಕಪ್ರಮುಖ ಸುದ್ದಿಮೈಸೂರು

ದಸರಾ ನಂತರ ಶಾಶ್ವತ ಪ್ರಾಧಿಕಾರಕ್ಕೆ ಚಿಂತನೆ : ವಿ.ಸೋಮಣ್ಣ

ಮೈಸೂರು,ಸೆ.17 : ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಶಾಶ್ವತ ಪ್ರಾಧಿಕಾರ ರಚಿಸುವುದು ಕಷ್ಟವಲ್ಲ, ಆದರೆ ಅದರ ಸಾಧಕ ಬಾಧಕ ಹೇಗಿರಬೇಕು ಎಂಬಿವೇ ಮೊದಲಾದ ಅಂಶಗಳೂ ಮುಖ್ಯವಾಗಿರುವ ಕಾರಣ ಈ ದಸರಾ ಮುಗಿದ ಮೇಲೆ ಈ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತರಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದಷ್ಟು ಹಣ ಇರಿಸಿ ಪ್ರಾಧಿಕಾರ ರಚಿಸುವುದು ಕಷ್ಟವಲ್ಲ, ಆದರೆ ಅದರ ಸಾಧಕ ಬಾಧಕ, ರಾಜಕೀಯೇತರ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೇ ಬೇಡವೇ ಎಂಬುದೂ ಮುಖ್ಯವಾಗಿದ್ದು, ಈ ಬಗ್ಗೆ ದಸರಾ ಬಳಿಕ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಇನ್ನು ಈ ಬಾರಿಯ ದಸರಾಕ್ಕೆ ಸಂಬಂಧಿಸಿದಂತೆ ಈ ಭಾಗದ ಎಲ್ಲ ಶಾಸಕರೊಡನೆಯೂ ವೈಯಕ್ತಿಕ ಸಂಪರ್ಕ ಸಾಧಿಸಿ ಸಹಕಾರ ಕೋರಿ ಒಂದೊಂದು ಹೊಣೆ ಒಪ್ಪಿಸಿರುವುದಾಗಿ ತಿಳಿಸಿದ ಸೋಮಣ್ಣ, ಇದು ಚಾಮುಂಡಿ ತಾಯಿಯ ಹಬ್ಬವಾಗಿರುವ ಕಾರಣ ಯಾರೊಬ್ಬರೂ ಮುನಿಸಿಕೊಳ್ಳದೇ ಸಹಕರಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ, ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಹಾನಿ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಕೇಂದ್ರ ಸಹಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ಮೈಸೂರಿಗೆ ತುಂಬಾ ಒಳ್ಳೆಯ ಡಿಸಿ ದೊರಕಿದ್ದು, ಅವರು ಪ್ರಾಮಾಣಿಕರೂ ಆಗಿರುವ ಕಾರಣ ದಸರಾ ವೇಳೆ ಮಾಡುವ ವೆಚ್ಚ ಪಾರದರ್ಶಕವಾಗಿರುತ್ತದೆ. ಇನ್ನೂ ಮೂರ‍್ನಾಲ್ಕು ತಿಂಗಳು ಅವರನ್ನು ಇಲ್ಲಿಯೇ ಉಳಿಸಿಕೊಡುವಂತೆ ಸಿಎಂ ಮನವೊಲಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆಂದರು.

ಈ ಬಳಿಕ ದಸರಾ ಕುರಿತು ಮಾತನಾಡಿ, ಈ ಬಾರಿಯ ವೈಮಾನಿಕ ಪ್ರದರ್ಶನ ಸಹಾ ವಿಶಿಷ್ಟ ರೀತಿ ಇರಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಚಾಮುಂಡಿಬೆಟ್ಟದಲ್ಲಿ ತಾತ್ಕಾಲಕ ಮಳಿಗೆ ತೆರವುಗೊಳಿಸಿದುದಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅಲ್ಲಿನ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಜನಮೆಚ್ಚುವ ರೀತಿ ಎಲ್ಲ ವ್ಯವಸ್ಥೆ ಕಲ್ಪಿಸಿಕೊಡುವ ಭರವಸೆ ನೀಡಿದರು.

ಬಳಿಕ, ಪೌರ ಕಾರ್ಮಿಕರಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ, ನಗರದ ಸುಮಾರು ನಾಲ್ಕು ನೂರು ಮಂದಿ ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಕೆಂಬ ಈ ಹಿಂದಿನ ನಿರ್ಧಾರ ರದ್ದುಪಡಿಸಿ ಅವರನ್ನು ಅಲಲಿಯೇ ಉಳಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದ್ದು, ದಸರಾ ವೇಳೆ ಅವರು ಸಹಾ ಸಂತೃಪ್ತರಾಗಿರುವಂತೆ ನೋಡಿಕೊಳ್ಳಲಾಗುವುದೆಂದರು.

ಇದಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ, ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ ಅವರನ್ನೂ ತಾವು ದಸರಾ ಆಚರಣೆಗೆ ಸಂಬಂಧಿಸಿದಂತೆ ಸಂಪರ್ಕಿಸಿ ಮಾತನಾಡಿರುವುದಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರವಾಹ ಹಾನಿ ಕುರಿತಂತೆ ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆ ೪೦ ಸಾವಿರ ಮನೆಗಳು ಪೂರ್ಣ ಅಥವಾ ಅರ್ಧಂಬರ್ಧ ಎಂಬಿವೇ ರೀತಿ ಹಾನಿಗೊಳಗಾಗಿದ್ದು, ಅವುಗಳ ಫಲಾನುಭವಿಗಳಿಗೆ ಮಧ್ಯವರ್ತಿ ಮೂಲಕ ಹಣ ನೀಡಿದರೆ ಅವ್ಯವಹಾರ ನಡೆಯಬಹುದೆಂಬ ಕಾರಣದಿಂದ ಡಿಸಿ, ಜಿಪಂ ಸಿಇಒ, ತಹಸೀಲ್ದಾರ್ ಮೂಲಕವೇ ಪರಿಹಾರ ಹಣ ತಲುಪಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು

ಜೊತೆಗೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಬಿನಿಗೆ ಬಾಗೀನ ಅರ್ಪಿಸಲು ಬಂದಾಗ ಆ ಭಾಗದಲ್ಲಿ ಪ್ರವಾಹದಿಂದ ಆಗಿರುವ ಗಮನಿಸಿದ್ದು, ಇದುವರೆಗೂ ಹಾಡಿ ನಿವಾಸಿಗಳಿಗೆ ವಿದ್ಯುತ್ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಚೆಸ್ಕಾಂಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಿ.ಕೆ. ಮಹೇಂದ್ರ, ಲೋಕೇಶ್‌ಬಾಬು, ಸುಬ್ರಮಣ್ಯ, ರಾಘವೇಂದ್ರ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: