ಮೈಸೂರು

ಹೆಡ್ ಫೋನ್ ಗಾಗಿ ರಾಬರಿ : ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪೊಲೀಸರ ಆತಿಥ್ಯ

ದುಬಾರಿ ಹೆಡ್ ಪೋನ್ ಆಸೆಗಾಗಿ ರಾಬರಿ ಪ್ರಕರಣ ನಡೆಸಿದ  ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ  ಮೈಸೂರಿನಲ್ಲಿ ನಡೆದಿದೆ.

ಬಂಧಿತರನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸನತ್ (20),ವಿದ್ಯಾವಿಕಾಸ್ ಕಾಲೇಜಿನ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿ ಓ.ಎಸ್.ಖಾನ್ (19),ಲಷ್ಕರ್ ಮೊಹಲ್ಲಾದ ಇಸ್ಮೈಲ್ ಖಾನ್(19)  ಸೈಯದ್ ಸೈಫ್(19) ಹಾಗೂ 16 ವರ್ಷದ ಡಿಪ್ಲೊಮಾ ಮಾಡುತ್ತಿರುವ ಬಾಲಕ ಎಂದು ಗುರುತಿಸಲಾಗಿದೆ.

ಇವರಲ್ಲಿ ಸನತ್ ಎಂಬವನು  ಕಳೆದ ತಿಂಗಳು ಅಮೆಜಾನ್ ಆನ್ ಲೈನ್ ನಲ್ಲಿ ಸುಮಾರು 20ಸಾವಿರ ರೂ.ಮೌಲ್ಯದ ಹೆಡ್  ಫೋನ್ ಬುಕ್ ಮಾಡಿದ್ದ.ಹೆಡ್ ಫೋನ್ ನ್ನು ತಲುಪಿಸಲು ಬಂದ ನೌಕರನನ್ನು ನಿರ್ಜನ ಪ್ರದೇಶಕ್ಕೆ ಬರುವಂತೆ ಮೊಬೈಲ್ ನಲ್ಲಿ ತಿಳಿಸಿದ್ದ ಎನ್ನಲಾಗಿದೆ. ನೌಕರ ಹೆಡ್ ಫೋನ್ ಸಮೇತ  ಮೈಸೂರಿನ  ಹೊರವಲಯದ ಮಾನಸಿ ನಗರಕ್ಕೆ ಬಂದಾಗ ನಿರ್ಜನ ಪ್ರದೇಶದಲ್ಲಿ ಕಾದು ಕುಳಿತಿದ್ದ ಸನತ್ ಹಾಗೂ ತಂಡ  ನೌಕರನ ಕಣ್ಣಿಗೆ ಖಾರದ ಪುಡಿ ಎರಚಿ ಹೆಡ್ ಫೋನ್ ಕಸಿದು ಪರಾರಿಯಾಗಿದ್ದರು. ಜನವರಿ 15 ರಂದು ರಾಬರಿ ನಡೆಸಿದ ತಂಡ ತಲೆ ಮರೆಸಿಕೊಂಡಿತ್ತು. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸ್‌ಪೆಕ್ಟರ್ ಜಗದೀಶ್ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಪ್ರಕರಣ ನಡೆದು ಒಂದು ತಿಂಗಳ ಬಳಿಕ  ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಅಪ್ರಾಪ್ತನನ್ನು ಬಾಲಮಂದಿರದ ವಶಕ್ಕೆ  ನೀಡಲಾಗಿದೆ ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಹೆಡ್ ಫೋನ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸನತ್ ಪಿಯುಸಿ ಯಲ್ಲಿ 590. ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದ ಎನ್ನಲಾಗುತ್ತಿದೆ.ಇದೀಗ ದುಬಾರಿ ಹೆಡ್ ಪೋನ್ ಆಸೆಗೆ ಬಿದ್ದು ಪೊಲೀಸರ ಆತಿಥ್ಯ ಸ್ವೀಕರಿಸುವಂತಾಗಿದೆ.

Leave a Reply

comments

Related Articles

error: