ಮೈಸೂರು

ಬಜೆಟ್ ಸಭೆಯಲ್ಲಿ ಪಾರಂಪರಿಕ ನಗರಿ ಘೋಷಣೆ ಮಾಡುವಂತೆ ಒತ್ತಾಯ

ಮೈಸೂರು ಎಂಜಿನಿಯರುಗಳ ಸಂಸ್ಥೆಯಲ್ಲಿ  ನಡೆದ ಪ್ರಜ್ಞಾವಂತ ಮತ್ತು ಕಾಳಜಿಯುಳ್ಳ ನಾಗರಿಕರ ವೇದಿಕೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮೈಸೂರು ನಗರದ ಅಭಿವೃದ್ಧಿಗೆ 800 ಕೋಟಿ ರೂ. ಮೀಸಲಿಡಬೇಕು ಹಾಗೂ ಮೈಸೂರನ್ನು ಪಾರಂಪರಿಕ ನಗರಿ ಎಂದು ಘೋಷಿಸಬೇಕು ಎಂಬ ಹಲವು ಬೇಡಿಕೆಗಳು ಕೇಳಿಬಂದವು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವಾಸು, ಮೈಸೂರು ನಗರದ ಅಭಿವೃದ್ಧಿಗೆ  ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಇಲ್ಲಿ ವ್ಯಕ್ತವಾಗಿರುವ ಹಲವು ಬೇಡಿಕೆಗಳ ಈಡೇರಿಕೆಗೆ  ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯ ಸಂಚಾಲಕರಾದ ಎಂ.ಲಕ್ಷ್ಮಣ ಮಾತನಾಡಿ, ನಗರವನ್ನು ಪಾರಂಪರಿಕ ನಗರಿ ಎಂದು ಘೋಷಿಸಿ ಆ ಕುರಿತಾದ ಪ್ರಸ್ತಾಪವೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಹೆಚ್ಚಿನ ಅನುದಾನ ಲಭಿಸಲಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.

ನಗರದಲ್ಲಿನ ರಸ್ತೆಗಳು ಮತ್ತು ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕಿದೆ. ಅಲ್ಲದೇ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಹೀಗಾಗಿ ನಗರದ ಅಭಿವೃದ್ಧಿಗೆ ತುರ್ತಾಗಿ 800 ಕೋಟಿ ರೂ. ಅಗತ್ಯವಿದೆ ಎಂದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ‍್ಯಕ್ಷ ಎ.ಎಸ್.ಸತೀಶ್, ಪಾಲಿಕೆ ಸದಸ್ಯ ಬಿ.ಎಲ್.ಭೈರಪ್ಪ, ಐಇಐ ಅಧ‍್ಯಕ್ಷ ಚಿನ್ನಸ್ವಾಮಿ ಸಭೆಯಲ್ಲಿ ಹಾಜರಿದ್ದರು.

ಪ್ರಮುಖ ಬೇಡಿಕೆಗಳು :

ಮೈಸೂರಿಗೆ ಪ್ರತ್ಯೇಕವಾದ ಜಲಮಂಡಳಿ ರಚನೆ, ಚಾಮುಂಡಿಬೆಟ್ಟದ ಸುತ್ತ ‘ಬಟಾನಿಕಲ್’ ಉದ್ಯಾನ ನಿರ್ಮಾಣ, ಕೆರೆ ಒತ್ತುವರಿ ತೆರವುಗೊಳಿಸುವುದು, 2ನೇ ಹೊರವರ್ತುಲ ರಸ್ತೆ ನಿರ್ಮಿಸಲು ಯೋಜನೆ, ರಸ್ತೆ ಬದಿ ವ್ಯಾಪಾರಕ್ಕೆ ಪ್ರತ್ಯೇಕವಾದ ಸೂಕ್ತ ಸ್ಥಳವನ್ನು ನಿಗದಿ ಮಾಡುವುದು, ಇನ್ನಷ್ಟು ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ, ಪಾರಂಪರಿಕತೆಗೆ ಅನುಗುಣವಾಗಿ ಮಾರುಕಟ್ಟೆಗಳ ಪುನರ್ ನಿರ್ಮಾಣ, ಬಯೋಟೆಕ್ ಹಾಗೂ ಐಟಿ ಪಾರ್ಕ್ ನಿರ್ಮಾಣ, ವಸ್ತು ಪ್ರದರ್ಶನ ಮೈದಾನವನ್ನು ದುಬೈನಲ್ಲಿ ಇರುವಂತೆ ‘ಗ್ಲೋಬಲ್ ವಿಲೇಜ್’ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುತಿತಂತೆ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಲು ತೀರ್ಮಾನಿಸಲಾಗಿದೆ.

 

Leave a Reply

comments

Related Articles

error: