ಪ್ರಮುಖ ಸುದ್ದಿಮೈಸೂರು

ಸೆ.22ರಂದು ‘ಸಿದ್ದರಾಮಯ್ಯ ಆಡಳಿತ ಅಂತರಂಗ-ಬಹಿರಂಗ’ ಗ್ರಂಥ ಬಿಡುಗಡೆ

ಜಾತಿ, ಹಣ, ತಂತ್ರ-ಕುತಂತ್ರಗಾರಿಕೆಯಿಂದ ಸಿದ್ದರಾಮಯ್ಯನವರ ಸೋಲು

ಮೈಸೂರು,ಸೆ.19 : ಕಾ.ತ.ಚಿಕ್ಕಣ್ಣ ಸಂಪಾದಕತ್ವದಲ್ಲಿ ಮೂಡಿರುವ ‘ಸಿದ್ದರಾಮಯ್ಯ ಆಡಳಿತ ಅಂತರಂಗ –ಬಹಿರಂಗ’ ವರ್ತಮಾನದ ಇತಿಹಾಸ ಗ್ರಂಥ ಲೋಕಾರ್ಪಣೆಯನ್ನು ಸೆ.22ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ನಾಡೋಜ ಎಚ್.ಎಸ್ ದೊರೆಸ್ವಾಮಿಯವರು ಕೃತಿ ಲೋಕಾರ್ಪಣೆಗೊಳಿಸುವರು, ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅಧ್ಯಕ್ಷತೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸ್ಕೃತಿ ಚಿಂತಕ ಡಾ.ಕೆ.ಮರುಳಸಿದ್ದಪ್ಪ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎಂ.ರಾಮಯ್ಯ, ಗ್ರಂಥ ಸಂಪಾದಕ ಕಾ.ತ.ಚಿಕ್ಕಣ್ಣ, ಜನ-ಮನ ಪ್ರಕಾಶನ ಗ್ರಂಥ ಪ್ರಕಾಶಕ ಗೋಪಾಲಕೃಷ್ಣಸ್ವಾಮಿ ಹಾಜರಿರಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಿ.ದೇವರಾಜ ಅರಸು ನಂತರ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಉತ್ತಮ ಆಡಳಿತ ನೀಡಿದ್ದ ಸಿದ್ದರಾಮಯ್ಯನವರನ್ನು  ಜಾತಿ, ಹಣ, ತಂತ್ರಗಾರಿಕೆಯಿಂದ ಸೋಲಿಸಲಾಯಿತು ಎಂದು ಪುನರುಚ್ಚರಿಸಿ, ಈ ಬಗ್ಗೆಯೂ ಉಲ್ಲೇಖಿಸಿದ್ದು, ಕೃತಿಯಲ್ಲಿ ಜೀವನ ವಿಚಾರ, ಸಾಮಾಜಿಕ ನ್ಯಾಯ, ಆಡಳಿತ ಅಂತರಂಗ, ಯೋಜನೆಗಳು, ಹಣಕಾಸು ನಿರ್ವಹಣೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಜನಾದೇಶ, ಜನ-ಮನ ಮುಂತಾದ ವಿಷಯಗಳನ್ನೊಳಗೊಂಡ ಸಮಾನ ಮನಸ್ಕರ ಲೇಖನಗಳಿದ್ದು ಎಂಟು ಅಧ್ಯಾಯದ ಗ್ರಂಥ ಇದಾಗಿದೆ, 2017ರಲ್ಲಿಯೇ ಬಿಡುಗಡೆಯಾಗಬೇಕಿದ್ದು, ಕಾರಣಾಂತರಗಳಿಂದ ಮುಂದೂಡಿದ್ದು, ಇದರಲ್ಲಿ ಚಾಮುಂಡೇಶ್ವರಿ ಸೋಲಿನ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ಎಂ.ಟಿ.ರವಿಕುಮಾರ್, ತಾ.ಪಂ. ಮಾಜಿ ಸದಸ್ಯ ಜಿ.ಕೆ.ಬಸವಣ್ಣ, ನಗರ ಕಾಂಗ್ರೆಸ್ ಕಾರ್ಯದರ್ಶಿ ಡೈರಿ ವೆಂಕಟೇಶ್, ಕ.ರಾ.ಹಿ.ಜಾ ವೇದಿಕೆ ಪತ್ರಿಕಾ ಕಾರ್ಯದರ್ಶಿ ಜಾಕೀರ್ ಹುಸೇನ್, ಯುವ ಮುಖಂಡರಾದ ಸ್ವಾಮೀಗೌಡ, ತ್ಯಾಗರಾಜ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: