ಪ್ರಮುಖ ಸುದ್ದಿ

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 20.75 ಲಕ್ಷ ರೂ. ಲಾಭ

ರಾಜ್ಯ( ಮಡಿಕೇರಿ) ಸೆ.20 : – ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018-19ನೇ ಸಾಲಿನಲ್ಲಿ ಒಟ್ಟು 10,746.03 ಲಕ್ಷ ರೂ.ಗಳ ವಹಿವಾಟು ನಡೆಸುವುದರೊಂದಿಗೆ 20.75 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಂತೆ ಲಾಭಾಂಶ ವಿತರಿಸಲು ಚಿಂತನೆ ನಡೆಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ತಿಳಿಸಿದ್ದಾರೆ.
ಸಂಘದ ಪ್ರಗತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ಪ್ರಸಕ 1129 ಮಂದಿ ಎ ತರಗತಿಯ ಸದಸ್ಯರನ್ನು ಹೊಂದಿದ್ದು, ಸದಸ್ಯರಿಂದ ಒಟ್ಟು 112.08 ಲಕ್ಷ ರೂ. ಪಾಲು ಬಂಡವಾಳ ಸಂಗ್ರಹಿಸಿದೆ. ಕ್ಷೇಮನಿಧಿ ಸೇರಿ 172.21 ಲಕ್ಷ ರೂ. ಇತರ ನಿಧಿ ಹಾಗೂ ನಿರಖು ಠೇವಣಿ ಸಂಚಯ ಠೇವಣಿ ಮತ್ತು ಇತರ ನಿಧಿ ಸೇರಿ ಒಟ್ಟು 1072.50 ಲಕ್ಷ ರೂ.ಗಳನ್ನು ಹೊಂದಿದೆ ಎಂದು ಹೇಳಿದರು.
ಸಂಘದ ಪಾಲು ಬಂಡವಾಳದ ಪೈಕಿ 370.37 ಲಕ್ಷ ರೂ.ಗಳನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಹಾಗೂ ಇತರ ಸಹಕಾರ ಸಂಸ್ಥೆಯಲ್ಲಿ ಪಾಲು, ನಿರಖು ಠೇವಣಿ ರೂಪದಲ್ಲಿ ಇರಿಸಲಾಗಿದೆ ಎಂದರು. ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ನಷ್ಟ ಹಾಗೂ ಸುಮಾರು 21 ಲಕ್ಷ ರೂ. ಸಾಲದಲ್ಲಿದ್ದ ಸಂಘವನ್ನು ತನ್ನ ಆಡಳತಾವಧಿಯಲ್ಲಿ ಲಾಭಕ್ಕೆ ತರುವುದರೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ 2019ರ ಮಾರ್ಚ್ ಅಂತ್ಯಕ್ಕೆ ಕೆಸಿಸಿ ಫಸಲು ಸಾಲ ಸೇರಿದಂತೆ ಸುಮಾರು 1603.48 ಲಕ್ಷ ರೂ.ಗಳ ಸಾಲವನ್ನು ಸದಸ್ಯರಿಗೆ ನೀಡಲಾಗಿದ್ದು, ಅತಿವೃಷ್ಟಿಯಿಂದಾಗಿ ಫಸಲು ನಷ್ಟ, ಕೃಷಿ ಉತ್ಪನ್ನಗಳ ಬೆಲೆ ಇಳಿಕೆಯಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದರೂ, ಸಂಘದ ಸದಸ್ಯರು ಶೇ.100ರಷ್ಟು ಕೆಸಿಸಿ ಫಸಲು ಸಾಲವನ್ನು ಮರುಪಾವತಿಸಿದ್ದಾರೆ ಎಂದು ತಿಳಿಸಿದ ಮಣಿ ಉತ್ತಪ್ಪ ಅವರು ಇದಕ್ಕಾಗಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಂಘವು ಎಂಸಿಎಫ್, ಮದ್ರಾಸ್ ಫರ್ಟಿಲೈಸರ್ಸ್, ಇಂಡಿಯನ್ ಪೊಟ್ಯಾಷ್. ಇಫ್ಕೊ, ಫ್ಯಾಕ್ಟ್, ಫ್ಯೂಚರ್ ಫರ್ಟಿಲೈಸರ್ಸ್, ಜುವಾರಿ ಕೋರಮಂಡಲ್ ಸೇರಿದಂತೆ ವಿವಿಧ ಸಂಸ್ಥೆಗಳ ಸಗಟು ಲೈಸೆನ್ಸ್ ಹೊಂದುವ ಮೂಲಕ ರಸಗೊಬ್ಬರವನ್ನು ನೇರವಾಗಿ ಖರೀದಿಸಿ ರೈತ ಸದಸ್ಯರಿಗೆ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸದಸ್ಯರು ಮತ್ತು ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಕ , ಹತ್ಯಾರು, ಸಿಮೆಂಟ್ ಹಾಗೂ ಇತರ ಅಗತ್ಯ ಸಾಮಾಗ್ರಿಗಳನ್ನು ಮಾರಾಟ ಮಾಡಿ 423.83 ಲಕ್ಷ ರೂ.ಗಳ ವಹಿವಾಟು ನಡೆಸಿದ್ದು ಆ ಮೂಲಕ 15.14 ಲಕ್ಷ ರೂ.ಗಳ ಲಾಭ ಗಳಿಸಿದೆ. ಆದರೆ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ಬಾರಿ ಸುಮಾರು 10 ಲಕ್ಷದಷ್ಟು ಕಡಿಮೆ ಲಾಭ ಬಂದಿದ್ದು, ಇದಕ್ಕೆ ರೈತರ ಆರ್ಥಿಕ ಮಟ್ಟ ಕುಸಿದು, ತೋಟ, ಗದ್ದೆಗಳಿಗೆ ಗೊಬ್ಬರ ಹಾಕುವುದನ್ನು ಕಡಿಮೆ ಮಾಡಿರುವುದು ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಾಲಮನ್ನಾ ಸೌಲಭ್ಯ ಅಲಭ್ಯ
ಸಂಘದ ಒಟ್ಟು 416 ಮಂದಿ ಸದಸ್ಯರು ಸಾಲ ಪಡೆದಿದ್ದು, ಈ ಪೈಕಿ ಸರಕಾರ ಸಾಲ ಮನ್ನಾ ಯೋಜನೆಯಡಿ ಕೇವಲ 124 ಮಂದಿಯನ್ನು ಮಾತ್ರ ಆಯ್ಕೆ ಮಾಡಿದೆ. ಅಲ್ಲದೆ ಆಯ್ಕೆಯಾದವರ ಪೈಕಿ 93 ಮಂದಿಗೆ ಮಾತ್ರ ಸಾಲ ಮನ್ನಾದ ಹಣ ಬಿಡುಗಡೆ ಮಾಡಿದೆ. ಉಳಿದವರಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲಾ ಸಾಲಗಾರರ ತಲಾ 50 ಸಾವಿರ ಹಾಗೂ ಯಡಿಯೂರಪ್ಪ ನೇತೃತ್ವದ ಸರಕಾರ ಎಲ್ಲಾ ರೈತರ ತಲಾ 25 ಸಾವಿರ ರೂ.ಗಳ ಸಾಲವನ್ನು ಮನ್ನಾ ಮಾಡಿತ್ತು. ಆದರೆ ಕುಮಾರಸ್ವಾಮಿ ನೇತೃತ್ವದ ಸರಕಾರ ಜಾರಿಗೆ ತಂದ ಸಾಲಮನ್ನಾ ಯೋಜನೆಯಿಂದ ರೈತರಿಗೆ ಭಾರೀ ಅನ್ಯಾಯವಾಗಿದೆ ಎಂದು ಮಣಿ ಉತ್ತಪ್ಪ ದೂರಿದರು. ಅಲ್ಲದೆ ಹಾಲಿ ಸರಕಾರ ಎಲ್ಲಾ ರೈತರಿಗೆ ಅನ್ವಯವಾಗುವಂತೆ ಸಾಲಮನ್ನಾ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದರೊಂದಿಗೆ ಸರಕಾರದ ಸಾಲ ಮನ್ನಾ ಯೋಜನೆಯಡಿ ಸಂಘಕ್ಕೆ ಸುಮಾರು 16 ಲಕ್ಷ ರೂ. ನೀಡಲು ಸರಕಾರ ಬಾಕಿ ಉಳಿಸಿಕೊಂಡಿದ್ದು, ಈ ಮೊತ್ತವನ್ನು ಸರಕಾರ ಕಾಲಕಾಲಕ್ಕೆ ಬಿಡುಗಡೆ ಮಾಡಿದಲ್ಲಿ ಸಹಕಾರ ಸಂಘಗಳ ಲಾಭ ಮತ್ತಷ್ಟು ಹೆಚ್ಚಲು ಮತ್ತು ಇದರಿಂದ ರೈತ ಸಹಕಾರಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಮಣಿಉತ್ತಪ್ಪ ಅಭಿಪ್ರಾಯಪಟ್ಟರು.
ನೂತನ ಕಟ್ಟಡ
ಸಂಘದ ಮುಖ್ಯ ಕಚೇರಿ ಕಟ್ಟಡ ಸೋರುತ್ತಿದ್ದು, ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಅದರಂತೆ ಕಟ್ಟಡದ ಪೂರ್ಣ ಭಾಗಕ್ಕೆ ಆರ್‍ಸಿಸಿ ಸ್ಲ್ಯಾಬ್ ಹಾಕಿ ಕಟ್ಟಡದ ಮುಂಭಾಗದಲ್ಲಿ ಮೂರು ವ್ಯಾಪಾರ ಮಳಿಗೆ ಹಾಗೂ ಹಿಂಭಾಗದಲ್ಲಿ ಅತಿಥಿಗೃಹ ನಿರ್ಮಿಸಲು ನಿರ್ಧರಿಸಲಾಗಿದೆ. ಸಂಘದ ನರೇಂದ್ರ ಮೋದಿ ಸಹಕಾರ ಭವನವನ್ನು ಸಭೆ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದ್ದು, ಬಾಡಿಗೆ ಪಡೆಯುವವರಿಗೆ ಅತಿಥಿಗೃಹದ ಅವಶ್ಯಕತೆ ಇರುವುದರಿಂದ ಸುಮಾರು 33.85 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು
ನರೇಂದ್ರ ಮೋದಿ ರೈತ ಸಹಕಾರ ಭವನ ನಿರ್ಮಾಣಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ 5 ಲಕ್ಷ ಹಾಗೂ ಸುನಿಲ್ ಸುಬ್ರಮಣಿ ಅವರು 2 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಅದರಂತೆ ಈ ಸಾಲಿನಲ್ಲಿ ಆ ಮೊತ್ತ ಜಮೆಯಾಗಿದೆ. ಆದರೆ ಸಂಸದ ಪ್ರತಾಪ್‍ಸಿಂಹ ಅವರು ನೀಡಿರುವ 5 ಲಕ್ಷ ರೂ.ಗಳ ನೆರವು ಇನ್ನು ಕೂಡಾ ಬಂದಿಲ್ಲ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಜಿಲ್ಲೆಯ ಕಾಫಿ, ಕರಿಮೆಣಸು ಬೆಳೆಗಾರರು ತೀವ್ರವಾದ ಸಂಕಷ್ಟದಲ್ಲಿದ್ದು, ಕೊಡಗಿನ ಸಂಸ್ಕೃತಿಯ ಪ್ರತೀಕವಾದ ಕುಪ್ಯಚಾಲೆ ಧರಿಸಿ ಸಂಸತ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಪ್ರತಾಪ್‍ಸಿಂಹ ಅವರು ಕೊಡಗಿನ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ದೇಶಕ್ಕೆ ವಿಯೆಟ್ನಾಂನಿಂದ ಕರಿಮೆಣಸು ಆಮದಾಗುವುದನ್ನು ತಡೆಯಲು ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕಾಫಿ ಬೆಳೆಗಾರರಿಗೆ ಕೇಂದ್ರ ಸರಕಾರದಿಂದ ಆರ್ಥಿಕ ನೆರವು ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವುದರೊಂದಿಗೆ ಕೊಡಗಿನ ಜನತೆಯ ಸಂಕಷ್ಟವನ್ನು ಪರಿಹರಿಸಬೇಕು ಎಂದು ಮಣಿಉತ್ತಪ್ಪ ಒತ್ತಾಯಿಸಿದರು.
ಸೆ.23 ರಂದು ಮಹಾಸಭೆ
ಸೆ.23 ರಂದು ಬೆಳಗ್ಗೆ 10 ಗಂಟೆಗೆ ಸಂಘದ ಮಹಾಸಭೆ ನರೇಂದ್ರಮೋದಿ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮರದಾಳು ಎಸ್.ಉಲ್ಲಾಸ್, ನಿರ್ದೇಶಕರಾದ ಕಣಜಾಲು ಕೆ.ಪೂವಯ್ಯ, ಪೇರಿಯನ ಎಸ್.ಪೂಣಚ್ಚ ಹಾಗೂ ಟಿ.ಎಸ್.ಧನಂಜಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: