ಪ್ರಮುಖ ಸುದ್ದಿ

`ವಿಕ್ರಮ್ ಲ್ಯಾಂಡರ್’ ಸಂಪರ್ಕಿಸುವ ಇಸ್ರೋ, ನಾಸಾ ಯತ್ನ ವಿಫಲ: ಚಂದ್ರನ ಅಂಗಳದಲ್ಲಿ 200 ಡಿಗ್ರಿ ಸೆಲ್ಸಿಯಸ್ ಶೀತಗಾಳಿ

ಬೆಂಗಳೂರು/ನವದೆಹಲಿ,ಸೆ.20-ಬಹುನಿರೀಕ್ಷೆಯ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಹಾಗೂ ನಾಸಾ ನಡೆಸಿದ ಪ್ರಯತ್ನ ವಿಫಲವಾಗಿದೆ.

ಸೆ.21 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದ್ದ ವಿಕ್ರಮ್ ಲ್ಯಾಂಡರ್ ಅನ್ನು ಮರು ಸಂಪರ್ಕಿಸುವ 14 ದಿನಗಳ ಗುಡುವು ಮುಕ್ತಾಯವಾಗಲಿದೆ. ಹೀಗಾಗಿ ವಿಕ್ರಮನ ಆಯುಷ್ಯ ಇನ್ನೊಂದೇ ಒಂದು ದಿನವಾಗಿದೆ.

ಲ್ಯಾಂಡರ್ ಇರುವ ದಕ್ಷಿಣ ಧ್ರುವದಲ್ಲಿ ಅಸಹನೀಯ ಎನ್ನಿಸುವಷ್ಟು ಚಳಿ ಆರಂಭವಾಗಲಿದೆ. ಈ ವಾತಾವರಣದಲ್ಲಿ ಲ್ಯಾಂಡರ್ ಬದುಕುಳಿಯುವುದಕ್ಕೆ ಸಾಧ್ಯವಿಲ್ಲ. ಮೈನಸ್ 200 ಡಿಗ್ರಿ ಸೆಲ್ಸಿಯಸ್ ಶೀತಗಾಳಿ ಬೀಸಲಿದ್ದು, ಲ್ಯಾಂಡರ್ ನ ಉಪಕರಣಗಳೆಲ್ಲ ಹೆಪ್ಪುಗಟ್ಟುವುದರಿಂದ ಅವುಗಳು ಮತ್ತೆ ಕಾರ್ಯಾಚರಿಸುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಸೆ.7ರಂದು ಚಂದ್ರಯಾನ-2ರ ವಿಕ್ರಮ್ ಯಶಸ್ವಿಯಾಗಿ ಇಳಿದಿದ್ದರೂ ಕೂಡಾ ಅದು ಭೂಮಿಯ ಜತೆಗಿನ ಸಂಪರ್ಕ ಕಡಿತವಾಗುತ್ತಿತ್ತು. ಚಂದ್ರನಲ್ಲಿನ ಭಾರೀ ಶೀತಗಾಳಿಯಿಂದ ಲ್ಯಾಂಡರ್ ನ ಕಾರ್ಯ ಸ್ಥಗಿತಗೊಳ್ಳುವುದಾಗಿ ವರದಿ ವಿವರಿಸಿದೆ.

ಹೀಗಾಗಿ ಆದ್ದರಿಂದಲೇ ಕಳೆದ ಹದಿಮೂರು ದಿನಗಳಿಂದ ವಿಕ್ರಂ ಜೊತೆ ಸಂಪರ್ಕ ಸಾಧಿಸುವ ಎಲ್ಲಾ ಸಾಧ್ಯತೆಗಳನ್ನೂ ಇಸ್ರೋ ಪ್ರಯೋಗಿಸಿದೆ. ನಾಸಾ ಸಹ ತನ್ನ ಆರ್ಬಿಟರ್ ಮೂಲಕ ವಿಕ್ರಮ್ ನ ಬಗ್ಗೆ ಮಾಹಿತಿ ಕಲೆ ಹಾಕುವ ಯತ್ನವನ್ನೂ ಮಾಡಿದೆ. ಆದರೆ ಇದುವರೆಗಿನ ಮಾಹಿತಿಯ ಪ್ರಕಾರ ಈ ಎಲ್ಲಾ ಪ್ರಯತ್ನಗಳೂ ಯಾವುದೇ ರೀತಿಯ ಧನಾತ್ಮಕ ಫಲಿತಾಂಶ ನೀಡಿಲ್ಲವಾದ್ದರಿಂದ ಸಾಳೆ ವಿಕ್ರಮ್ ಗೆ ಗುಡ್ ಬೈ ಹೇಳುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ವಿಕ್ರಮ್ ಲ್ಯಾಂಡರ್ ನ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಖಚಿತಪಡಿಸಬೇಕಾಗಿದೆ. ಆದರೆ ಕೊನೆಯ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆ ವಿಕ್ರಮ್ ಲ್ಯಾಂಡರ್ ಜತೆಗಿನ ಮರು ಸಂಪರ್ಕದ ಭರವಸೆಯನ್ನು ಕಳೆದುಕೊಂಡಿತ್ತು. ಇದರೊಂದಿಗೆ ಆರು ಚಕ್ರವನ್ನೊಳಗೊಂಡ ಪ್ರಗ್ಯಾನ್ ರೋವರ್ ಕಾರ್ಯ ಕೂಡಾ ಅಂತ್ಯಗೊಂಡಂತಾಗಿದೆ.

ಈಗಾಗಲೇ ಚಂದ್ರನ ಸಮೀಪ ಹಾರಾಡುತ್ತಿರುವ ಚಂದ್ರಯಾನ 2 ರ ಆರ್ಬಿಟರ್ ಏಳು ವರ್ಷಗಳ ಕಾಲ ತನ್ನ ಕೆಲಸವನ್ನು ಮಾಡಲಿದ್ದು, ಚಂದ್ರನ ದಕ್ಷಿಣ ಧ್ರುವದ ಕುರಿತ ಮಾಹಿತಿಯನ್ನು ನಿರಂತರವಾಗಿ ನೀಡಲಿದೆ. ಆರ್ಬಿಟರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಅಪ್ ಗ್ರೇಡ್ ಮಾಡುವುದಾಗಿ ಇಸ್ರೋ ತಿಳಿಸಿದೆ.

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಮಿಷನ್ ನಲ್ಲಿ ಎಲ್ಲರೂ ನಮ್ಮ ಜತೆ ಬೆಂಬಲ ವ್ಯಕ್ತಪಡಿಸಿ ಹುರಿದುಂಬಿಸಿದ್ದಕ್ಕೆ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದೆ.

ಸೆ.7 ರಂದು ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು. (ಎಂ.ಎನ್)

Leave a Reply

comments

Related Articles

error: